ಮಹಿಳೆಯರ ಮದುವೆ ವಯಸ್ಸನ್ನು 21 ವರ್ಷಕ್ಕೆ ಹೆಚ್ಚಿಸುವ ಮಸೂದೆ ಲೋಕಸಭೆಯಲ್ಲಿ ಮಂಡನೆ

Update: 2021-12-21 17:30 GMT

ಹೊಸದಿಲ್ಲಿ,ಡಿ.21: ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18ರಿಂದ 21 ವರ್ಷಗಳಿಗೆ ಹೆಚ್ಚಿಸಲು ಉದ್ದೇಶಿಸಿರುವ ಬಾಲ್ಯವಿವಾಹ ನಿಷೇಧ (ತಿದ್ದುಪಡಿ) ಮಸೂದೆ,2021ನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ.

ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಯ ಅವಗಾಹನೆಗೆ ಸಲ್ಲಿಸಬೇಕೆಂಬ ಪ್ರತಿಪಕ್ಷಗಳ ಆಗ್ರಹಗಳೊಂದಿಗೆ ಕೋಲಾಹಲದ ನಡುವೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿಯವರು ಮಸೂದೆಯನ್ನು ಸದನದಲ್ಲಿ ಮಂಡಿಸಿದರು. ಬಳಿಕ ಮಸೂದೆಯನ್ನು ಸ್ಥಾಯಿ ಸಮಿತಿಗೆ ಕಳುಹಿಸುವ ಸರಕಾರದ ಉದ್ದೇಶವನ್ನು ಅವರು ಪ್ರಕಟಿಸಿದ್ದು,ಮಸೂದೆಯನ್ನು ಸಮಿತಿಗೆ ಕಳುಹಿಲಾಗಿದೆ.

ಸಚಿವ ಸಂಪುಟವು ಕಳೆದ ವಾರ ಅನುಮೋದಿಸಿದ್ದ ಮಸೂದೆಯ ಮಂಡನೆ ಪರಿಷ್ಕೃತ ಸದನ ಕಲಾಪಗಳ ಪಟ್ಟಿಯಲ್ಲಿರಲಿಲ್ಲವಾದರೂ,ಸರಕಾರವು ಬಳಿಕ ಅದನ್ನು ಪೂರಕ ಪಟ್ಟಿಯ ಮೂಲಕ ಕಾರ್ಯಸೂಚಿಯಲ್ಲಿ ಸೇರಿಸಿತ್ತು.

ಭೋಜನದ ನಂತರ ಮಸೂದೆಯನ್ನು ಮಂಡಿಸಲು ಇರಾನಿ ಎದ್ದು ನಿಂತಾಗ ಪ್ರತಿಪಕ್ಷ ಸದಸ್ಯರು ಮಂಡನೆಯನ್ನು ಬಲವಾಗಿ ವಿರೋಧಿಸಿದರು.

ಚಾರ್ಟರ್ಡ್ ಅಕೌಂಟಂಟ್‌ಗಳು,ಕಾಸ್ಟ್ ಆ್ಯಂಡ್ ವಕ್ಸ್ ಅಕೌಂಟಂಟ್‌ಗಳು ಮತ್ತು ಕಂಪನಿ ಕಾರ್ಯದರ್ಶಿಗಳ (ತಿದ್ದುಪಡಿ) ಮಸೂದೆ 2021ನ್ನೂ ಸ್ಥಾಯಿ ಸಮಿತಿಗೆ ಕಳುಹಿಸಿದ ಬಳಿಕ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News