ಉಮರ್ ಖಾಲಿದ್ ಮಿತ್ರ ಎಂದಿದ್ದಕ್ಕೆ 'ಯಾರು ಹೇಳಿದ್ದು' ಎಂದು ಕೇಳಿದ ಕನ್ಹಯ್ಯ

Update: 2021-12-21 17:02 GMT
Photo: Twitter

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ಮತ್ತು ಮಾಜಿ ವಿದ್ಯಾರ್ಥಿ ಹೋರಾಟಗಾರ ಕನ್ಹಯ್ಯ ಕುಮಾರ್ ಅವರ ವೀಡಿಯೊವೊಂದು  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಅವರು ಜೈಲಿನಲ್ಲಿರುವ ಹೋರಾಟಗಾರರಾದ ಉಮರ್ ಖಾಲಿದ್ ಹಾಗೂ ಮೀರನ್ ಹೈದರ್ ಬಗ್ಗೆ ಪತ್ರಕರ್ತನ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಕಾಣಬಹುದು.

ಕುಮಾರ್ ಬಿಹಾರದ ಶಿವಾನ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಪತ್ರಕರ್ತರೊಬ್ಬರು ಇಬ್ಬರು ವಿದ್ಯಾರ್ಥಿ ಹೋರಾಟಗಾರರ ಬಗ್ಗೆ ಪ್ರಶ್ನೆಯನ್ನು ಕೇಳಿದರು.  ಅದಕ್ಕೆ ಕುಮಾರ್ ಅವರು "ಮೀರನ್ ಹೈದರ್ ನನ್ನ ಪಕ್ಷಕ್ಕೆ ಸೇರಿದವರಾ?" ಎಂದು ಕೇಳುತ್ತಾರೆ.

ಅವರು ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ದಲ್ಲಿದ್ದಾರೆ ಎಂದು ವರದಿಗಾರ ಕುಮಾರ್ ಗೆ ಹೇಳಿದಾಗ, "ಹಾಗಾದರೆ ನೀವು ಅವರ ಬಗ್ಗೆ ನನ್ನನ್ನು ಏಕೆ ಕೇಳುತ್ತಿದ್ದೀರಿ?" ಎಂದು ಕೇಳುತ್ತಾರೆ.

ಆಗ ವರದಿಗಾರ ಕುಮಾರ್ ಗೆ ಉಮರ್ ಖಾಲಿದ್ ಈ ಹಿಂದೆ ನಿಮ್ಮ ಸ್ನೇಹಿತ ಹಾಗೂ  ಪರಿಚಯದವನಾಗಿದ್ದ ಎಂದು ಹೇಳುತ್ತಾರೆ.  ಅದಕ್ಕೆ ಕುಮಾರ್ "ನಿಮಗೆ ಯಾರು ಹೇಳಿದರು?" ಎಂದು ಪ್ರಶ್ನಿಸಿದ್ದಾರೆ. ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಕನ್ಹಯ್ಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಕನ್ಹಯ್ಯ ಅವರನ್ನು ಟ್ವಿಟ್ಟರಿಗರೊಬ್ಬರು "ಬೆನ್ನಿಗೆ ಇರಿಯುವ ವಂಚಕ" ಎಂದು ಟೀಕಿಸಿದ್ದಾರೆ. ಹಲವಾರು ಮಂದಿ ಕನ್ಹಯ್ಯ ಮತ್ತು ಉಮರ್ ಖಾಲಿದ್ ಒಟ್ಟಿಗೆ ಇರುವ ಪೋಟೋಗಳನ್ನು ಟ್ವೀಟ್ ಮಾಡಿ ಕನ್ಹಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

2016 ರಲ್ಲಿ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಕುರಿತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ  (ಜೆಎನ್‌ಯು) ನಡೆದ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಮತ್ತು ಕನ್ಹಯ್ಯ ಕುಮಾರ್ ಮುಂಚೂಣಿಯಲ್ಲಿದ್ದರು.

ಉಮರ್ ಖಾಲಿದ್ ಅವರೊಂದಿಗಿನ ತಮ್ಮ ನಂಟನ್ನು ಮರೆತಿರುವ ಕನ್ಹಯ್ಯ ಕುಮಾರ್ ಅವರನ್ನು ಹಲವು ಜನರು ಹಾಗೂ ಹೋರಾಟಗಾರರು ಟ್ವಿಟರ್ ನಲ್ಲಿ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News