ಬ್ಲ್ಯಾಕ್‌ಮೇಲ್ ಮಾಡಿದ ವಿದ್ಯಾರ್ಥಿಯ ಹತ್ಯೆ: 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ವಶಕ್ಕೆ
ಚೆನ್ನೈ, ಡಿ. 21: ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯಲ್ಲಿ 21 ವರ್ಷದ ಕಾಲೇಜು ವಿದ್ಯಾರ್ಥಿ ಪ್ರೇಮ್‌ಕುಮಾರ್‌ನ ಮೃತದೇಹ ದಫನ ಮಾಡಿರುವುದು ಪತ್ತೆಯಾದ ಬಳಿಕ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರನ್ನು ತಮಿಳುನಾಡು ಪೊಲೀಸರು ಸೋಮವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ಜಿಲ್ಲೆಯ ಈಚಂಗಾಡು ಗ್ರಾಮದಲ್ಲಿ ಪುರುಷನೋರ್ವನ ಹಲ್ಲು ಹಾಗೂ ಕೂದಲು ಪತ್ತೆಯಾಗಿರುವ ಬಗ್ಗೆ ಸ್ಥಳೀಯ ನಿವಾಸಿಗಳು ತಿರುವಲ್ಲೂರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ತನಿಖೆಯ ವೇಳೆ ಪತ್ತೆಯಾದ ಮೊಬೈಲ್ ತನಿಖಾ ತಂಡ ಚೆಂಗಲಪಟ್ಟು ಜಿಲ್ಲೆಯಲ್ಲಿರುವ 10ನೇ ತರಗತಿಯ ಈ ಇಬ್ಬರು ಬಾಲಕಿಯರ ಮನೆಗೆ ತಲುಪಲು ನೆರವಾಯಿತು. ವಿಚಾರಣೆ ಸಂದರ್ಭ ಬಾಲಕಿಯರು, ಪ್ರೇಮ್ ಕುಮಾರ್ ತಮ್ಮನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ಹೇಳಿದ್ದಾರೆ. ಪ್ರೇಮ್ ಕುಮಾರ್ ತಮ್ಮಿಬ್ಬರೊಂದಿಗೆ ಸಂಬಂಧ ಹೊಂದಿದ್ದ. ಈ ಬಗ್ಗೆ ಇತರ ವಿದ್ಯಾರ್ಥಿನಿಯರಿಗೆ ತಿಳಿದಿರಲಿಲ್ಲ. ಆತ ನಮ್ಮ ಖಾಸಗಿ ಕ್ಷಣದ ಫೋಟೊಗಳನ್ನು ತೆಗೆದುಕೊಂಡಿದ್ದ. ಅನಂತರ ಸಾಮಾಜಿಕ ಜಾಲ ತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದ. 50 ಸಾವಿರ ರೂಪಾಯಿ ನೀಡುವಂತೆ ಬೇಡಿಕೆ ಒಡ್ಡಿದ್ದ ಎಂದು ಬಾಲಕಿಯರು ಪೊಲೀಸರಿಗೆ ತಿಳಿಸಿದ್ದಾರೆ.
ಪ್ರೇಮ್ ಕುಮಾರ್‌ನ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗದೇ ಇದ್ದಾಗ ಬಾಲಕಿಯರು ಸಾಮಾಜಿಕ ಜಾಲ ತಾಣದ ಮೂಲಕ ಗೆಳೆಯನಾಗಿದ್ದ ಅಶೋಕ್‌ನ ನೆರವು ಕೋರಿದರು. ಅಶೋಕ್‌ನ ಸಲಹೆಯಂತೆ ಶೋಲಾವರಂ ಟೋಲ್ ಪ್ಲಾಝಾಕ್ಕೆ ಶುಕ್ರವಾರ ಸಂಜೆ ಬರುವಂತೆ ಪ್ರೇಮ್ ಕುಮಾರ್‌ಗೆ ಬಾಲಕಿಯರು ತಿಳಿಸಿದ್ದರು. ಪ್ರೇಮ್ ಕುಮಾರ್ ಅಲ್ಲಿಗೆ ಆಗಮಿಸಿದಾಗ ಮೊಬೈಲ್‌ನಲ್ಲಿರುವ ತಮ್ಮ ಫೋಟೊಗಳನ್ನು ಅಳಿಸುವಂತೆ ಬಾಲಕಿಯರು ಅಶೋಕನಿಗೆ ತಿಳಿಸಿದ್ದರು. ಆದರೆ, ಅಲ್ಲಿಗೆ ಆಗಮಿಸಿದ ಪ್ರೇಮ್ ಕುಮಾರ್‌ನನ್ನು ಅಶೋಕ ಹಾಗೂ ಆತನ ಗೆಳೆಯರು ಅಪಹರಿಸಿ ಈಚಂಗಾಡು ಗ್ರಾಮಕ್ಕೆ ಕೊಂಡೊಯ್ದಿದ್ದಾರೆ. ಅಲ್ಲಿ ಆತನನ್ನು ಹತ್ಯೆಗೈದು, ಮೃತದೇಹವನ್ನು ದಫನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.