ಆನ್‌ಲೈನ್ ಕಡ್ಡಾಯ ಯಾಕೆ?

Update: 2021-12-21 18:00 GMT

ಮಾನ್ಯರೇ,

  ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಇತ್ತೀಚೆಗೆ ದಾವಣಗೆರೆಯಿಂದ 17 ಜನ ಕುಟುಂಬ ಸಮೇತರಾಗಿ ರೈಲಿನಲ್ಲಿ ಹೋಗಿದ್ದೆವು. ಹೋಗುವ ಎರಡು ದಿನ ಮುಂಚೆಯೇ, ಕುತೂಹಲಕ್ಕೆ ರೈಲಿನ ಟಿಕೆಟ್ ದರ ಎಷ್ಟೆಂಬುದನ್ನು ಮಾಹಿತಿ ತಿಳಿಯಲು ರೈಲ್ವೆ ಸ್ಟೇಷನ್‌ಗೆ ಹೋಗಿ ವಿಚಾರಿಸಿದರೆ, ‘‘ಟಿಕೆಟ್ ಅನ್ನು ನೀವು ಆನ್‌ಲೈನ್‌ನಲ್ಲಿಯೇ ಬುಕ್ ಮಾಡಿಕೊಳ್ಳಿ, ಇಲ್ಲಿ ಕೊಡಲಾಗುವುದಿಲ್ಲ’’ ಎಂದು ಹೇಳಿದರು. ಆಗ ನಾನು ಯಾಕೆಂದು ಮರುಪ್ರಶ್ನೆ ಮಾಡಿದ್ದಕ್ಕೆ ಅವರು, ರಾಣಿ ಚೆನ್ನಮ್ಮ, ಶತಾಬ್ದಿ ಸೇರಿದಂತೆ ಕೆಲವೊಂದಕ್ಕೆ ಮಾತ್ರ ಇಲ್ಲಿ ಟಿಕೆಟ್ ಕೊಡಲಾಗುವುದು ಎಂದರು. ಕೊನೆಗೆ ಆನ್‌ಲೈನ್‌ನಲ್ಲಿಯೇ ಟಿಕೆಟ್ ಬುಕ್ ಮಾಡೋಣ ಎಂದರೆ ಅಲ್ಲಿಯೂ ಒಂದು ರೋಚಕ ತಿರುವು ಇತ್ತು. ಒಂದು ಐಡಿಗೆ ಕೇವಲ ಆರು ಜನರಿಗೆ ಮಾತ್ರ ಟಿಕೆಟ್ ಬುಕ್ ಮಾಡುವ ಅವಕಾಶವಿತ್ತು. ಹೇಗೋ ನನ್ನ ಇನ್ನಿಬ್ಬರ ಸ್ನೇಹಿತರಿಗೆ ಮನವಿ ಮಾಡಿ ಟಿಕೆಟ್ ಬುಕ್ ಮಾಡಿಸಿದೆ. ಆನಂತರ ಆರಾಮವಾಗಿ ಹೋಗಿ ಬಂದೆವು. ಆನ್‌ಲೈನ್‌ಲ್ಲಿಯೇ ಟಿಕೆಟ್ ಬುಕ್ ಮಾಡಬೇಕೆಂದರೆ ಮೊದಲನೆಯದಾಗಿ ಸ್ಮಾರ್ಟ್ ಫೋನ್ ಜೊತೆ ಇಂಟರ್ನೆಟ್ ಸೌಲಭ್ಯ, ನೆಟ್ ಬ್ಯಾಂಕಿಂಗ್ ಎಲ್ಲವೂ ಇರಬೇಕು, ಓದಿದವರಾಗಬೇಕು. ಆದರೆ ಇಂದಿಗೂ ಕೂಡ ಎಷ್ಟೋ ಮಂದಿ ಅನಕ್ಷರಸ್ಥರು, ಸ್ಮಾರ್ಟ್ ಫೋನ್ ಇಲ್ಲದವರೂ ಇದ್ದಾರೆ. ರೈಲಿನಲ್ಲಿ ಪ್ರಯಾಣಿಸುವವರೆಲ್ಲರೂ ಓದಿದವರೇ ಆಗಿರುವುದಿಲ್ಲ, ಇನ್ನು ಆನ್‌ಲೈನ್‌ನಲ್ಲಿಯೇ ಟಿಕೆಟ್ ಬುಕ್ ಮಾಡುವುದು ಎಲ್ಲಿಯ ಮಾತು? ಕೆಲವೊಂದು ರೈಲುಗಳಿಗೆ ಸ್ಟೇಷನ್‌ಲ್ಲಿಯೇ ಟಿಕೆಟ್ ಕೊಟ್ಟರೆ, ಇನ್ನು ಕೆಲವು ರೈಲುಗಳಿಗೆ ಮಾತ್ರ ಇಲ್ಲ. ಯಾಕೀ ನಿರ್ಬಂಧ?
ಕೊರೋನ ಕಾರಣದಿಂದ ಈ ಹಿಂದೆ ಕಳೆದೆರಡು ವರ್ಷಗಳಿಂದ ರದ್ದಾಗಿದ್ದ ಎಲ್ಲಾ ರೈಲುಗಳು ಈಗ ಮರು ಸಂಚರಿಸುತ್ತಿವೆ. ಜನಜೀವನ ಯಥಾಸ್ಥಿತಿಗೆ ಮರಳಿದೆ, ಆದರೂ ರೈಲ್ವೆ ಸ್ಟೇಷನ್‌ನಲ್ಲಿಯೇ ಟಿಕೆಟ್ ಕೊಡಲು ಯಾಕೆ ನಿರ್ಬಂಧ? ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಲು ಕಡ್ಡಾಯ ಮಾಡುವುದರಿಂದ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು. ಸರಕಾರ ಈಗಲಾದರೂ ಇತ್ತ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.
 

Writer - ಮುರುಗೇಶ ಡಿ., ದಾವಣಗೆರೆ

contributor

Editor - ಮುರುಗೇಶ ಡಿ., ದಾವಣಗೆರೆ

contributor

Similar News