ಗೋವಾ: "ಪರಿಕ್ಕರ್‌ ಇಲ್ಲದೇ ಪಕ್ಷ ಸೋತಿದೆ" ಎಂದು ಬಿಜೆಪಿ ತ್ಯಜಿಸಿದ ಮತ್ತೋರ್ವ ಶಾಸಕ

Update: 2021-12-22 09:09 GMT
Photo: Facebook/carlosalmeidagoa

ಪಣಜಿ: ಗೋವಾದ ವಾಸ್ಕೋ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಶಾಸಕ ಕಾರ್ಲೋಸ್ ಅಲ್ಮೇಡಾ ಮಂಗಳವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷವನ್ನು ತೊರೆದ ಎರಡನೇ ಬಿಜೆಪಿ ಶಾಸಕರಾಗಿದ್ದಾರೆ ಎಂದು Indianexpress.com ವರದಿ ಮಾಡಿದೆ.

ಸ್ಪೀಕರ್ ಕಚೇರಿಗೆ ರಾಜೀನಾಮೆ ಸಲ್ಲಿಸಿದ ನಂತರ, ಅಲ್ಮೇಡಾ ಸುದ್ದಿಗಾರರೊಂದಿಗೆ ಮಾತನಾಡಿ, "2017 ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಎದುರಾಳಿ ದಾಜಿ ಸಲ್ಕರ್ ಆಡಳಿತ ಪಕ್ಷಕ್ಕೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ನಿರ್ಗಮಿಸಿದ್ದೇನೆ" ಎಂದು ಹೇಳಿಕೆ ನೀಡಿದ್ದಾರೆ.

"ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಿಧನದ ನಂತರ ಬಿಜೆಪಿ ಹಿಂದಿನ ಪಕ್ಷವಾಗಿ ಉಳಿದಿಲ್ಲ" ಎಂದು ಅಲ್ಮೇಡಾ ಹೇಳಿದರು. “ನಾವು ಪರಿಕ್ಕರ್ ಇಲ್ಲದೆ ಕಳೆದುಹೋಗಿದ್ದೇವೆ. ಅವರ ಎಲ್ಲಾ ನಿಷ್ಠಾವಂತರು ಹೋಗಿದ್ದಾರೆ,” ಎಂದು ಅವರು ಹೇಳಿದರು.

ಅವರು ಟಿಎಂಸಿ ಸೇರಬಹುದು ಎಂಬ ಊಹಾಪೋಹಗಳು ಹರಡಿತ್ತು. ಆದರೆ ಅಲ್ಮೇಡಾ ವಿವಿಧ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಯಾವ ಪಕ್ಷ ಸೇರುವುದು ಎಂಬ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದರು.

ಅಲ್ಮೇಡಾ ನಿರ್ಗಮನದೊಂದಿಗೆ ಬಿಜೆಪಿ ತನ್ನ ಇಬ್ಬರು ಹಾಲಿ ಶಾಸಕರನ್ನು ಕಳೆದುಕೊಂಡಿದೆ. ಗೋವಾ ವಿಧಾನಸಭೆಯ ಬಲವನ್ನು 40 ರಿಂದ 33 ಕ್ಕೆ ಇಳಿಸಲಾಗಿದೆ. ಇದುವರೆಗೆ ಕಾಂಗ್ರೆಸ್‌ನ ಮೂವರು, ಬಿಜೆಪಿಯ ಇಬ್ಬರು, ಗೋವಾ ಫಾರ್ವರ್ಡ್ ಪಕ್ಷದ ಒಬ್ಬರು ಮತ್ತು ಒಬ್ಬ ಸ್ವತಂತ್ರ ಶಾಸಕರು ರಾಜೀನಾಮೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News