ದಿಲ್ಲಿಯಲ್ಲಿ ಒಮೈಕ್ರಾನ್ ಆತಂಕ: ಕ್ರಿಸ್ಮಸ್, ಹೊಸ ವರ್ಷದ ಆಚರಣೆ ಸಭೆಗೆ ಡಿಡಿಎಂಎ ನಿಷೇಧ
ಹೊಸದಿಲ್ಲಿ, ಡಿ. 22: ಕೋವಿಡ್ ನ ರೂಪಾಂತರಿ ಒಮೈಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಹೊಸವರ್ಷ ಅಥವಾ ಕ್ರಿಸ್ಮಸ್ ಆಚರಣೆಗೆ ನಗರದಲ್ಲಿ ಸಭೆ ಸೇರಲು ಅಥವಾ ಕಾರ್ಯಕ್ರಮ ನಡೆಸಲು ಅವಕಾಶ ನೀಡುವುದಿಲ್ಲ ಎಂದು ದಿಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ)ಹೇಳಿದೆ.
ಡಿಸೆಂಬರ್ 15ರ ತನ್ನ ಆದೇಶದಲ್ಲಿ ಡಿಡಿಎಂಎ, ಎಲ್ಲ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ ಹಾಗೂ ಯಾವುದೇ ರೀತಿಯ ಸಭೆ ನಡೆಸಬಾರದು ಎಂದಿದೆ.
ದಿಲ್ಲಿಯ ಎನ್‌ಸಿಟಿಯಲ್ಲಿ ಕ್ರಿಸ್ಮಸ್ ಅಥವಾ ಹೊಸವರ್ಷ ಆಚರಣೆಯ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸಭೆ, ಸಮಾವೇಶ ನಡೆಸುವುದನ್ನು ನಡೆಸಲು ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಡಿಸಿಪಿಗಳು ಅವಕಾಶ ನೀಡಬಾರದು ಎಂದು ಅದು ಸೂಚಿಸಿದೆ.
ಹಲವು ಸಂದರ್ಭಗಳಲ್ಲಿ ಕೋವಿಡ್ ನಿಯಮಗಳನ್ನು ವ್ಯಾಪಕವಾಗಿ ಉಲ್ಲಂಘಿಸಲಾಗುತ್ತಿದೆ ಹಾಗೂ ಅಗತ್ಯದ ನಿರ್ಬಂಧಗಳನ್ನು ಅನುಸರಿಸುತ್ತಿಲ್ಲ ಎಂದು ಅದು ಡಿಡಿಎಂಎ ತನ್ನ ಆದೇಶಲ್ಲಿ ಪ್ರತಿಪಾದಿಸಿದೆ. ಆದುದರಿಂದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಡಿಸಿಪಿಗಳು ತಮಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಅನಿರೀಕ್ಷಿತ ತಪಾಸಣೆ, ದಾಳಿ ನಡೆಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅದು ಹೇಳಿದೆ.
ಜಾರಿ ವ್ಯವಸ್ಥೆಯನ್ನು ಸಶಕ್ತಗೊಳಿಸುವಂತೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಅತ್ಯಂತ ಮುನ್ನೆಚ್ಚರಿಕೆ ವಹಿಸಲು ಸಾಕಷ್ಟು ಜಾರಿ ತಂಡಗಳನ್ನು ನಿಯೋಜಿಸುವಂತೆ ಡಿಡಿಎಂಎ ಅಧಿಕಾರಿಗಳಿಗೆ ನಿರ್ದೇಶಿಸಿದೆ.