ಅಭಿವ್ಯಕ್ತಿ ಸ್ವಾತಂತ್ರ್ಯದ ದಮನಕ್ಕೆ ತ್ರಿಪುರಾ ಸರಕಾರದಿಂದ ಸ್ಥಳೀಯ ಮಾಧ್ಯಮಕ್ಕೆ ಕಡಿವಾಣ: ಎಡಿಟರ್ಸ್‌ ಗಿಲ್ಡ್

Update: 2021-12-24 05:23 GMT

ಅಗರ್ತಲಾ, ಡಿ. 22: ತ್ರಿಪುರಾದಲ್ಲಿರುವ ಬಿಜೆಪಿ ಸರಕಾರ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸಲು ಸ್ಥಳೀಯ ಮಾಧ್ಯಮವನ್ನು ನಿಯಂತ್ರಿಸಲು ಹಾಗೂ ದುರ್ಬಳಕೆ ಮಾಡಿಕೊಳ್ಳಲು ಸಮರ್ಥವಾಗಿದೆ. ಆದರೆ, ರಾಜ್ಯದ ಹೊರಗೆ ಮೂಲ ಹೊಂದಿರುವ ಸುದ್ದಿ ಸಂಸ್ಥೆಗಳು ಹಾಗೂ ಪತ್ರಕರ್ತರನ್ನು ಈ ರೀತಿ ಮಾಡಲು ಸಾಧ್ಯವಾಗಿಲ್ಲ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಬುಧವಾರ ಬಿಡುಗಡೆಗೊಳಿಸಿದ ಸತ್ಯಶೋಧನಾ ವರದಿ ಹೇಳಿದೆ.

ಕೋಮು ಹಿಂಸಾಚಾರ ಹಾಗೂ ಮಾದ್ಯಮಗಳ ಅಭಿವ್ಯಕ್ತಿ ಸ್ವಾತಂತ್ರದ ದಮನದ ವರದಿಗಳ ಹಿನ್ನೆಲೆಯಲ್ಲಿ ಸ್ವತಂತ್ರ ಪತ್ರಕರ್ತ ಪ್ರಶಾಂತ್ ಭೂಷಣ್, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಸಂಜಯ್ ಕಪೂರ್, ಇಂಫಾಲ ರಿವ್ಯೆವ್ ಆಫ್ ಆರ್ಟ್ಸ್ ಆ್ಯಂಡ್ ಪಾಲಿಟಿಕ್ಸ್ನ ಸಂಪಾದಕ ಪ್ರದೀಪ್ ಪಂಜೌಬಮ್ ಅವರನ್ನು ಒಳಗೊಂಡ ತಂಡವನ್ನು ಸಂಘಟನೆ ಕಳುಹಿಸಿ ಕೊಟ್ಟಿದೆ.

ಮೂವರು ಸದಸ್ಯರ ತಂಡ ನವೆಂಬರ್ 28ರಿಂದ ಡಿಸೆಂಬರ್ 1ರ ನಡುವೆ ತ್ರಿಪುರಾಕ್ಕೆ ಭೇಟಿ ನೀಡಿದೆ. ತ್ರಿಪುರಾ ಮಾನವ ಹಕ್ಕು ಸಂಘಟನೆಯನ್ನು ಉಲ್ಲೇಖಿಸಿದ ವರದಿ, ರಾಜ್ಯದಲ್ಲಿ ಸುದ್ದಿ ಸಂಸ್ಥೆಗಳ ಮೇಲಿನ ಒತ್ತಡ ಅಗಾಧವಾಗಿತ್ತು ಹಾಗೂ ಬಹುಸಂಖ್ಯೆಯ ಸ್ಥಳೀಯ ಮಾಧ್ಯಮಗಳು ಸರಕಾರಕ್ಕೆ ಶರಣಾಗಿವೆ ಎಂದು ಹೇಳಿದೆ.

‘‘ಪತ್ರಿಕೆಗಳ ಆದಾಯ ಸರಕಾರದಿಂದ ಜಾಹೀರಾತಿನಿಂದ ಬರುವುದರಿಂದ, ಅದರ ಸ್ಥಗಿತ ಪತ್ರಿಕೆಯ ಕುಸಿತಕ್ಕೆ ಕಾರಣವಾಗುತ್ತದೆ’’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರು ಹೇಳಿರುವುದಾಗಿ ವರದಿ ತಿಳಿಸಿದೆ.

ಸರಕಾರದ ನಿಲುವಿಗೆ ಅನುಗುಣವಾಗಿರದ ಕಾರಣಕ್ಕೆ ಸ್ಥಳೀಯ ಹಲವು ಕೇಬಲ್ ಟಿವಿ ಚಾನೆಲ್ಗಳು ಮುಚ್ಚಿವೆ. ಈ ಟಿವಿ ಚಾನೆಲ್ಗಳಲ್ಲಿ ಮೃಣಾಲಿನಿ ಇಎನ್ಎನ್, ದಿನ್-ರಾತ್, ಆಕಾಶ್ ತ್ರಿಪುರಾ ಹಾಗೂ ಹಲ್ಲ್ಬೋಲ್ ಸೇರಿವೆ. ಕೆಲವು ತಿಂಗಳ ಹಿಂದೆ ಉದಯಪುರದ ಡ್ಯುರಾಂಟೊ ಟಿ.ವಿ. ಕಚೇರಿಯಲ್ಲಿ ದಾಂಧಲೆ ನಡೆದಿತ್ತು.

ರಾಜ್ಯದಲ್ಲಿ ಸರಕಾರ ಹಾಗೂ ಮಾಧ್ಯಮದ ನಡುವೆ ಮೌಖಿಕವಲ್ಲದ ಪೋಷಕ -ಕಕ್ಷಿಯ ಬಾಂದವ್ಯವನ್ನು ಮೂವರು ಸದಸ್ಯರ ತಂಡ ಗುರುತಿಸಿದೆ. ಸ್ಥಳೀಯ ಸುದ್ದಿ ಸಂಸ್ಥೆಗಳು ಈ ಸಂಬಂಧವನ್ನು ಕೇವಲ ಸ್ವೀಕರಿಸಿರುವುದು ಮಾತ್ರವಲ್ಲ. ಅದನ್ನು ಸಾಮಾನ್ಯೀಕರಿಸಿದೆ ಎಂದು ಎಡಿಟರ್ಸ್ ಗಿಲ್ಡ್ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News