​ಮಕ್ಕಳಿಗೂ ಕೋವಿಡ್ ಲಸಿಕೆ ನೀಡಲು ಬ್ರಿಟನ್ ನಿರ್ಧಾರ

Update: 2021-12-23 03:04 GMT

ಲಂಡನ್ : ಬ್ರಿಟನ್‌ನಲ್ಲಿ ಒಮೈಕ್ರಾನ್ ಪ್ರಬೇಧ ಕಾಣಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ದೈನಿಕ ಕೋವಿಡ್-19 ಪ್ರಕರಣಗಳ ಸಂಖ್ಯೆ ಲಕ್ಷದ ಗಡಿ ದಾಟುತ್ತಿದ್ದಂತೆಯೇ ಹೊಸ ಅಲೆ ಎದುರಿಸಲು ಸರ್ಕಾರ ಸಮರೋಪಾದಿ ಸಿದ್ಧತೆ ನಡೆಸಿದೆ.

ಸೋಂಕು ತಡೆಯುವ ಕ್ರಮವಾಗಿ ಐದರಿಂದ ಹನ್ನೊಂದು ವರ್ಷದವರೆಗಿನ ಮಕ್ಕಳಿಗೂ ಲಸಿಕೆ ಒದಗಿಸಲು ಒಪ್ಪಿಗೆ ನೀಡಿದೆ.

ಸೋಂಕಿತರ ಐಸೊಲೇಶನ್ ಅವಧಿಯನ್ನು ಕಡಿತಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಕ್ರಿಸ್ಮಸ್ ಬಳಿಕದ ನಿರ್ಬಂಧಗಳನ್ನು ವೇಲ್ಸ್ ಹಾಗೂ ಉತ್ತರ ಐರ್ಲೆಂಡ್ ಪ್ರಕಟಿಸಿದೆ. ಸ್ಕಾಟ್ಲೆಂಡ್ ಈಗಾಗಲೇ ಈ ಕ್ರಮ ಅನುಸರಿಸಿದ್ದು, ಆತಿಥ್ಯ ಉದ್ಯಮಗಳು ದೊಡ್ಡ ಕೂಟಗಳನ್ನು ಆಯೋಜಿಸದಂತೆ ಸೂಚಿಸಲಾಗಿದೆ.

ಫೈಝರ್-ಬಯೋ ಎನ್‌ ಟೆಕ್ ಕಡಿಮೆ ಡೋಸ್‌ನ ಹೊಸ ಲಸಿಕೆ ಸುರಕ್ಷಿತ ಹಾಗೂ ಪರಿಣಾಮಕಾರಿ ಎಂದು ದೃಢಪಟ್ಟಿರುವ ಹಿನ್ನೆಲೆಯಲ್ಲಿ 11 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲು ಅನುಮತಿ ನೀಡಲಾಗಿದೆ ಎಂದು ಬ್ರಿಟನ್‌ನ ಮೆಡಿಸಿನ್ಸ್ ಆ್ಯಂಡ್ ಹೆಲ್ತ್‌ಕೇರ್ ಪ್ರಾಡೆಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿ ಹೇಳಿದೆ.

ಈ ವಯೋಮಿತಿಯ ಮಕ್ಕಳಿಗೆ ಇದರಿಂದಾಗುವ ಧನಾತ್ಮಕ ಪ್ರಯೋಜನನ್ನು ದೃಢಪಡಿಸಲು ಸಾಕಷ್ಟು ಪುರಾವೆಗಳು ಇವೆ ಎಂದು ಎಂಎಚ್‌ಆರ್‌ಎ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೂನ್ ರೈನ್ ಹೇಳಿದ್ದಾರೆ.

ಏತನ್ಮಧ್ಯೆ ದೇಶದಲ್ಲಿ ದೈನಿಕ ಪ್ರಕರಣಗಳು ದಾಖಲೆ ಮಟ್ಟಕ್ಕೆ ಏರಿವೆ. ಈಗಾಗಲೇ 1.48 ಲಕ್ಷ ಮಂದಿಯನ್ನು ಬಲಿಪಡೆದಿರುವ ದೇಶದಲ್ಲಿ ಬುಧವಾರ ಹೊಸದಾಗಿ 1,06,122 ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ ವರ್ಷದ ಬೇಸಿಗೆಯಲ್ಲಿ ಸಾಮೂಹಿಕ ಪರೀಕ್ಷೆ ಆರಂಭಿಸಿದ ಬಳಿಕ ಇದು ಗರಿಷ್ಠ ಸಂಖ್ಯೆಯ ಪ್ರಕರಣ ಎಂದು ಸರ್ಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News