"ಬಿಜೆಪಿ ನೇತೃತ್ವದ ಕೇಂದ್ರ ಸರಕಾರದಡಿಯಲ್ಲಿ ಇದುವರೆಗೆ 570 ವಿರೋಧಿಗಳನ್ನು ತನಿಖಾ ಏಜನ್ಸಿಗಳು ಟಾರ್ಗೆಟ್ ಮಾಡಿವೆ"

Update: 2021-12-23 10:07 GMT

ಹೊಸದಿಲ್ಲಿ: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ 2014ರಲ್ಲಿ ಆಡಳಿತಕ್ಕೆ ಬಂದಾಗಿನಿಂದ ಪಕ್ಷದ ಎದುರಾಳಿಗಳ ಹಾಗೂ ಟೀಕಾಕಾರರ ವಿರುದ್ಧ ಕೇಂದ್ರ ತನಿಖಾ ಏಜನ್ಸಿಗಳು ಕೈಗೊಂಡ ಕ್ರಮಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ ಎಂದು ಎನ್‍ಡಿಟಿವಿ ನಡೆಸಿದ ವಿಶ್ಲೇಷಣೆಯಿಂದ ತಿಳಿದು ಬಂದಿದೆ.  

2014ರಿಂದ ಕೇಂದ್ರ ತನಿಖಾ ಏಜನ್ಸಿಗಳು  570 ಮಂದಿ ಸರಕಾರದ ವಿರೋಧಿಗಳು ಮತ್ತು ಟೀಕಾಕಾರರನ್ನು ಟಾರ್ಗೆಟ್ ಮಾಡಿದೆ ಹಾಗೂ ಕೆಲ ಪ್ರಕರಣಗಳಲ್ಲಿ ಸಂಬಂಧಿತರ ಕುಟುಂಬ ಸದಸ್ಯರನ್ನೂ ಟಾರ್ಗೆಟ್ ಮಾಡಿದೆ ಎಂದು ಸುದ್ದಿ ಸಂಸ್ಥೆ ಕಂಡುಕೊಂಡಿದೆ. ತದ್ವಿರುದ್ಧವೆಂಬಂತೆ 2014ರಿಂದೀಚೆಗೆ ಬಿಜೆಪಿಗೆ ನಂಟು ಹೊಂದಿರುವ ಕೇವಲ 39 ಮಂದಿಯ ವಿರುದ್ಧ ಸಿಬಿಐ, ಅಥವಾ ಜಾರಿ ನಿರ್ದೇಶನಾಲಯ ಅಥವಾ ಆದಾಯ ತೆರಿಗೆ ಇಲಾಖೆಯಿಂದ ಕ್ರಮಕ್ಕೆ ಒಳಗಾಗಿದ್ದಾರೆಂದು ಎನ್‍ಡಿಟಿವಿ ವಿಶ್ಲೇಷಣೆ ಕಂಡುಕೊಂಡಿದೆ.

ತನಿಖಾ ಏಜನ್ಸಿಗಳು 2014ರಿಂದ ವಿಪಕ್ಷಗಳ 257 ರಾಜಕಾರಣಿಗಳನ್ನು ಟಾರ್ಗೆಟ್ ಮಾಡಿದ್ದರೆ ಈ ರಾಜಕಾರಣಿಗಳ 140 ಮಂದಿ ಸಹವರ್ತಿಗಳು ಹಾಗೂ ಸಂಬಂಧಿಕರನ್ನೂ ಟಾರ್ಗೆಟ್ ಮಾಡಲಾಗಿದೆ. ಗರಿಷ್ಠ 75 ಮಂದಿ ಕಾಂಗ್ರೆಸ್‍ನವರಾಗಿದ್ದರೆ ತೃಣಮೂಲದ 36 ಮಂದಿ, ಆಮ್ ಆದ್ಮಿ ಪಕ್ಷದ  ನಾಯಕ ಹಾಗೂ ದಿಲ್ಲಿ ಸೀಎಂ ಅರವಿಂದ್ ಕೇಜ್ರಿವಾಲ್ ಸಹಿತ ಅವರ ಪಕ್ಷದ ಕನಿಷ್ಠ 18 ಮಂದಿ ಟಾರ್ಗೆಟ್ ಆಗಿದ್ದಾರೆ ಎಂದು ವರದಿ ತಿಳಿಸಿದೆ.

ಕಳೆದ ಏಳು ವರ್ಷಗಳಲ್ಲಿ ಬಿಜೆಪಿಯೇತರ ಯಾವುದೇ ಪಕ್ಷದವರನ್ನೂ ಬಿಟ್ಟಿಲ್ಲ, ಕಾಶ್ಮೀರದ ಫಾರೂಖ್ ಅಬ್ದುಲ್ಲಾ ಕುಟುಂಬ, ಮೆಹಬೂಬಾ ಮುಫ್ತಿ ಹಾಗೂ ತಮಿಳುನಾಡಿ ಸಿಎಂ ಸ್ಟಾಲಿನ್ ಅವರ ಸಂಬಂಧಿಕರೂ ತನಿಖಾ ಏಜನ್ಸಿಗಳ ಟಾರ್ಗೆಟ್ ಆಗಿದ್ದರು.

ಕಾಂಗ್ರೆಸ್, ತೃಣಮೂಲ ಹಾಗೂ ಆಪ್ ಹೊರತಾಗಿ ನ್ಯಾಷನಲ್ ಕಾನ್ಫರೆನ್ಸಿನ 14 ಮಂದಿ ಪಿಡಿಪಿ ಹಾಗೂ ಟಿಡಿಪಿಯ ತಲಾ 12 ಮಂದಿ ಡಿಎಂಕೆಯ 11 ಮಂದಿ, ಎನ್‍ಸಿಪಿ ಹಾಗೂ ಆರ್‍ಜೆಡಿಯ ತಲಾ ಎಂಟು ಮಂದಿ, ಬಿಜೆಡಿ, ಬಿಎಸ್‍ಪಿಯ ತಲಾ 7 ಮಂದಿ ಜೆಡಿ(ಎಸ್), ಶಿವಸೇನೆ ಹಾಗೂ ಸಮಾಜವಾದಿ ಪಕ್ಷದ ತಲಾ ಆರು ಮಂದಿ ತನಿಖಾ ಏಜನ್ಸಿಗಳ ಟಾರ್ಗೆಟ್ ಆಗಿದ್ದಾರೆ.

ಯುಪಿಎ ಸರಕಾರದ ಎರಡನೇ ಅವಧಿಯಲ್ಲಿ ಕೇವಲ 85 ಮಂದಿ ವಿಪಕ್ಷಗಳ ನಾಯಕರನ್ನು ಟಾರ್ಗೆಟ್ ಮಾಡಲಾಗಿತ್ತು  ಎಂದು ಎನ್‍ಡಿಟಿವಿ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News