ಎರಡೂ ಕೈಗಳಲ್ಲೂ ಬೌಲಿಂಗ್ ಮಾಡಬಲ್ಲ ರಾಧಾಕೃಷ್ಣನ್!

Update: 2021-12-23 18:07 GMT
photo:Instagram/@nivvirad

ಹೊಸದಿಲ್ಲಿ, ಡಿ. 23: ಭಾರತ ಮೂಲದ 19 ವರ್ಷದ ಕ್ರಿಕೆಟಿಗ ನಿವೇದನ್ ರಾಧಾಕೃಷ್ಣನ್ 2022ರ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯದ ಪರವಾಗಿ ಆಡಲು ಆಯ್ಕೆಯಾಗಿದ್ದಾರೆ.

ಅವರು ಆಸ್ಟ್ರೇಲಿಯದ ಅಂಡರ್-19 ವಿಶ್ವಕಪ್ ತಂಡದಲ್ಲಿರುವ ಇಬ್ಬರು ಭಾರತ ಮೂಲದ ಆಟಗಾರರ ಪೈಕಿ ಒಬ್ಬರು. ಇನ್ನೊಬ್ಬರು 17 ವರ್ಷದ ಹರ್‌ಕೀರತ್ ಬಾಜ್ವ.

2022 ಜನವರಿ 14ರಂದು ಗಯಾನದಲ್ಲಿ ನಡೆಯಲಿರುವ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯವು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ. ಈ ಇಬ್ಬರೂ ಹದಿಹರೆಯದ ಆಟಗಾರರು ಆಸ್ಟ್ರೇಲಿಯದ ಅಂಡರ್-16 ತಂಡದಲ್ಲಿಯೂ ಆಡಿದ್ದಾರೆ.

2013ರಲ್ಲಿ ಭಾರತದಿಂದ ಸಿಡ್ನಿಗೆ ಹೋಗಿರುವ ರಾಧಾಕೃಷ್ಣನ್ ಎರಡೂ ಕೈಗಳಲ್ಲಿ ಆಡಬಲ್ಲ ಆಸ್ಟ್ರೇಲಿಯದಲ್ಲಿ ಗೊತ್ತಿರುವ ಏಕೈಕ ಕ್ರಿಕೆಟಿಗ. ಇದಕ್ಕೂ ಮೊದಲು ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ನೆಟ್ ಬೌಲರ್ ಆಗಿದ್ದರು.

ಉಭಯ ಕೈಗಳ ಸ್ಪಿನ್ನರ್

ರಾಧಾಕೃಷ್ಣನ್ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಜನಿಸಿದರು. ಅವರಿಗೆ 10 ವರ್ಷ ಆಗಿದ್ದಾಗ ಅವರ ಕುಟುಂಬವು 2013ರಲ್ಲಿ ಆಸ್ಟ್ರೇಲಿಯಕ್ಕೆ ವಲಸೆ ಹೋಯಿತು. ಅವರ ತಂದೆ ಅಂಬು ಸೆಲ್ವನ್ ತಮಿಳುನಾಡಿನ ಜೂನಿಯರ್ ಕ್ರಿಕೆಟಿಗನಾಗಿದ್ದರು. ಬಳಿಕವೂ ಅವರು ತಮಿಳುನಾಡು ಕ್ರಿಕೆಟ್ ಅಸೋಸಿಯೇಶನ್ (ಟಿಎನ್‌ಸಿಎ) ಲೀಗ್‌ಗಳಲ್ಲಿ ತಂಡಗಳನ್ನು ನಿಭಾಯಿಸುವ ಉಸ್ತುವಾರಿ ಹೊತ್ತಿದ್ದರು.

ರಾಧಾಕೃಷ್ಣನ್ 2019ರಲ್ಲಿ ಪಾಕಿಸ್ತಾನದ ವಿರುದ್ಧ ದುಬೈಯಲ್ಲಿ ಆಸ್ಟ್ರೇಲಿಯದ ಅಂಡರ್-16 ತಂಡದಲ್ಲಿ ಆಡಿದ್ದರು. ಆ ಪಂದ್ಯಾವಳಿಯಲ್ಲಿ ಅವರು ಏಕದಿನ ಪಂದ್ಯಗಳ ಗರಿಷ್ಠ ವಿಕೆಟ್ ಗಳಿಕೆದಾರರಾಗಿದ್ದರು. ಅವರು ನಾಲ್ಕು ಪಂದ್ಯಗಳಿಂದ ಏಳು ವಿಕೆಟ್‌ಗಳನ್ನು ಗಳಿಸಿದ್ದರು.

ರಾಧಾಕೃಷ್ಣನ್ ಎರಡೂ ಕೈಗಳಲ್ಲಿ ಸ್ಪಿನ್ ಬೌಲಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಪಂದ್ಯದ ಸ್ಥಿತಿಗತಿಯನ್ನು ಹೊಂದಿಕೊಂಡು ಓವರೊಂದರ ನಡುವೆ ಯಾವುದೇ ಕೈಯಲ್ಲಿ ಬೌಲ್ ಮಾಡುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ ಎಂಬುದಾಗಿ Cricket.com.au ಬಣ್ಣಿಸಿದೆ.

‘‘ಮೂಲತಃ ಬಲಗೈ-ಪ್ರಧಾನವಾಗಿರುವ ನನಗೆ, ಎಡಗೈಯಲ್ಲೂ ಬೌಲಿಂಗ್ ಮಾಡಲು ಪ್ರಯತ್ನಿಸುವಂತೆ ಸಲಹೆ ನೀಡಿದ್ದು ನನ್ನ ತಂದೆ’’ ಎಂದು ರಾಧಾಕೃಷ್ಣನ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News