3 ತಿಂಗಳ ಹಿಂದೆ ಟಿಎಂಸಿ ಸೇರಿದ್ದ ಮಾಜಿ ಗೋವಾ ಶಾಸಕ ರಾಜೀನಾಮೆ
ಪಣಜಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದ ಸುಮಾರು ಮೂರು ತಿಂಗಳ ನಂತರ ಗೋವಾದ ಮಾಜಿ ಶಾಸಕ ಲಾವೂ ಮಮ್ಲತ್ದಾರ್ ಅವರು ಶುಕ್ರವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಟಿಎಂಸಿ ಕೋಮುವಾದಿ. ರಾಜ್ಯ ವಿಧಾನಸಭೆ ಚುನಾವಣೆಗೆ ಮೊದಲು ಅದು ಹಿಂದೂಗಳು ಹಾಗೂ ಕ್ರಿಶ್ಚಿಯನ್ನರ ನಡುವೆ ಮತಗಳನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಮಾಜಿ ಪೋಂಡಾ ಶಾಸಕ ಲಾವೂ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಸೇರಿದ್ದರು. ಫೆಬ್ರವರಿ 2022 ರಲ್ಲಿ ನಡೆಯಲಿರುವ ಗೋವಾ ಅಸೆಂಬ್ಲಿ ಚುನಾವಣೆಯಲ್ಲಿ ಎಲ್ಲಾ 40 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿರುವ ಟಿಎಂಸಿಗೆ ಸೇರ್ಪಡೆಗೊಂಡ ರಾಜ್ಯದ ಮೊದಲ ಕೆಲವು ಸ್ಥಳೀಯ ನಾಯಕರಲ್ಲಿ ಒಬ್ಬರಾಗಿದ್ದರು.
ಟಿಎಂಸಿ ಚುನಾವಣೆಯ ನಂತರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮಹಿಳೆಯರ ಕಲ್ಯಾಣ ಯೋಜನೆ ಜಾರಿಗೊಳಿಸುವ ಹೆಸರಿನಲ್ಲಿ ಜನರ ಡೇಟಾವನ್ನು ಸಂಗ್ರಹಿಸುತ್ತಿದೆ ಎಂದು ಅವರು ಆರೋಪಿಸಿದರು.
ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಮ್ಲತ್ದಾರ್, "ಪಶ್ಚಿಮ ಬಂಗಾಳದಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷದ ಕಾರ್ಯಕ್ಷಮತೆಯಿಂದ ನಾನು ಸಂಪೂರ್ಣವಾಗಿ ಪ್ರಭಾವಿತನಾಗಿ ಟಿಎಂಸಿಗೆ ಸೇರಿದ್ದೆ. ಟಿಎಂಸಿ ಅತ್ಯಂತ ಜಾತ್ಯತೀತ ಪಕ್ಷ ಎಂಬ ಭಾವನೆ ನನ್ನಲ್ಲಿತ್ತು. ಆದರೆ ಬಿಜೆಪಿಗಿಂತ ಟಿಎಂಸಿ ಕೆಟ್ಟದ್ದಾಗಿದೆ ಎಂದು ಕಳೆದ 15-20 ದಿನಗಳಿಂದ ನನ್ನ ಗಮನಕ್ಕೆ ಬಂದಿದೆ' ಎಂದು ಹೇಳಿದರು.