ಉ.ಪ್ರ. : ‘ಲವ್ ಜಿಹಾದ್’ ಆರೋಪಿಸಿ ಅಂಗಡಿ ಮುಚ್ಚಿಸಿದ ಬಜರಂಗದಳದ ಕಾರ್ಯಕರ್ತರು

Update: 2021-12-24 18:06 GMT

ಸಾಂದರ್ಭಿಕ ಚಿತ್ರ

ಲಕ್ನೋ, ಡಿ. 24: ಬಜರಂಗದಳದ ಕಾರ್ಯಕರ್ತರು ಗುರುವಾರ ಸಂಜೆ ಉತ್ತರಪ್ರದೇಶದ ಮೊರದಾಬಾದ್ ಜಿಲ್ಲೆಯಲ್ಲಿರುವ ಶಬು ಖಾನ್ ಎಂಬವರ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿ ಮುಚ್ಚಿಸಿದ ಹಾಗೂ ‘ಹರ್ ಹರ್ ಮಹಾದೇವ್’, ‘ಜೈಶ್ರೀರಾಮ್’ ಘೋಷಣೆಗಳನ್ನು ಕೂಗಿದ ಘಟನೆ ನಡೆದಿದೆ. ‌

ಜ್ಯೂಸ್ ಅಂಗಡಿಯಲ್ಲಿ ನಡೆದ ಘಟನೆಯ ವೀಡಿಯೊವನ್ನು ‘ಟೈಮ್ಸ್ ಆಫ್ ಇಂಡಿಯಾ’ದ ಪತ್ರಕರ್ತ ಕನ್ವರ್‌ದೀಪ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಶಬು ಖಾನ್ ಅವರು ಕಳೆದ 10-12 ವರ್ಷಗಳಿಂದ ಇಲ್ಲಿ ಜ್ಯೂಸ್ ಅಂಗಡಿ ನಡೆಸುತ್ತಿದ್ದರು. ಅಂಗಡಿ ಹೆಸರು ‘ನ್ಯೂ ಸಾಯಿ ಜ್ಯೂಸ್ ಸೆಂಟರ್’ ಎಂದು ವರದಿ ಹೇಳಿದೆ. ತಾನು ಮುಸ್ಲಿಂ ಆಗಿರುವ ಕಾರಣಕ್ಕಾಗಿ ಅಂಗಡಿಯನ್ನು ಬಲವಂತವಾಗಿ ಮುಚ್ಚಿಸಲು ಬಜರಂಗದಳದ ಕಾರ್ಯಕರ್ತರು ಪ್ರಯತ್ನಿಸಿದ್ದಾರೆ ಎಂದು ಖಾನ್ ಹೇಳಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಜರಂಗ ದಳದ ಕಾರ್ಯಕರ್ತ ನವನೀತ್ ಶರ್ಮಾ, ಮುಸ್ಲಿಂ ವ್ಯಕ್ತಿ ಹಿಂದೂ ಪ್ರದೇಶದಲ್ಲಿ ಜ್ಯೂಸ್ ಅಂಗಡಿ ನಡೆಸುತ್ತಿದ್ದಾನೆ. ಜನರನ್ನು ವಂಚಿಸಲು ಆತ ಹಿಂದೂ ಹೆಸರನ್ನು ತನ್ನ ಜ್ಯೂಸ್ ಅಂಗಡಿಗೆ ಇರಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ಜ್ಯೂಸ್ ಸೆಂಟರ್ ನ ಅಡಿಯಲ್ಲಿ ಶಬು ಖಾನ್ ಹಿಂದೂ ಪ್ರದೇಶದಲ್ಲಿ ‘ಲವ್ ಜಿಹಾದ್’ ನಡೆಸುತ್ತಿದ್ದಾನೆ ಎಂದು ಕೂಡ ಅವರು ಆರೋಪಿಸಿದ್ದಾರೆ.
 
ಆದರೆ, ಈ ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿದವರು ಯಾರು ? ಹಾಗೂ ಯಾರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂಬುದು ಪೊಲೀಸರ ಟ್ವೀಟ್ ಸೂಚಿಸಿಲ್ಲ ಎಂದು ‘ದಿ ವೈರ್’ ವರದಿ ಮಾಡಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News