ದ.ಕ. ಜಿಲ್ಲೆಗೆ ಶೀಘ್ರದಲ್ಲೇ ಜೆನೋಮ್ ಸೀಕ್ವೆನ್ಸಿಂಗ್ ಲ್ಯಾಬ್: ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ

Update: 2021-12-25 02:15 GMT
photo: pti

ಮಂಗಳೂರು: ಜಿಲ್ಲೆಯಲ್ಲಿ ಜೆನೋಮ್ ಸೀಕ್ವೆನ್ಸಿಂಗ್ ಸೌಲಭ್ಯವನ್ನು ಕಲ್ಪಿಸಲು ಬೇಕಾಗಿರುವ ಅಗತ್ಯತೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಸರ್ಕಾರ, ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರಿಗೆ ಸೂಚಿಸಿದೆ.

ಇಂಡಿಯನ್ ಎಸ್‌ಎಆರ್‌ಎಸ್-ಕೋವ್-2 ಜೆನೋಮಿಕ್ಸ್ ಕನ್‌ಸ್ಟೋರಿಯಂ (ಐಎನ್‌ಎಸ್‌ಎಸಿಓಜಿ) ಮಾರ್ಗಸೂಚಿಗಳಿಗೆ ಅನುಗುಣವಾಗಿ ಜಿಲ್ಲೆಯಲ್ಲಿ ಜೆನೋಮ್ ಸೀಕ್ವೆನ್ಸಿಂಗ್ ಲ್ಯಾಬ್ ಆರಂಭಕ್ಕೆ ಜಿಲ್ಲಾಡಳಿತ ಮನವಿ ಮಾಡಿಕೊಂಡಿತ್ತು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಜೆನೋಮ್ ಸೀಕ್ವೆನ್ಸಿಂಗ್‌ಗಾಗಿ 120 ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸಿದ್ದರೂ ಕೇವಲ 34ರ ಫಲಿತಾಂಶ ಮಾತ್ರ ಬಂದಿದೆ. ಉಳಿದ 86 ಮಾದರಿಗಳ ಫಲಿತಾಂಶವನ್ನು ಜಿಲ್ಲಾಡಳಿತ ನಿರೀಕ್ಷಿಸುತ್ತಿದೆ. ಗುರುವಾರದ ವರೆಗೆ ಜಿಲ್ಲೆಯಲ್ಲಿ ಏಳು ಒಮೈಕ್ರಾನ್ ಪ್ರಬೇಧದ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ವಿವರಿಸಿದ್ದಾರೆ.

ಜಿಲ್ಲೆಯಲ್ಲಿ ಜೆನೋಮ್ ಸೀಕ್ವೆನ್ಸಿಂಗ್ ಲ್ಯಾಬ್ ಆರಂಭಿಸುವ ಬಗ್ಗೆ ಒಂದೆರಡು ದಿನಗಳಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ. "ಲ್ಯಾಬ್ ಆರಂಭಿಸುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಈ ಮೊದಲು ಬೆಂಗಳೂರಿನ ಪ್ರಯೋಗಾಲಯಕ್ಕೆ ಹೆಚ್ಚಿನ ಒತ್ತಡ ಇರಲಿಲ್ಲ. ಆದರೆ ಒಮೈಕ್ರಾನ್ ಭೀತಿ ಹಿನ್ನೆಲೆಯಲ್ಲಿ ಕೆಲಸದ ಒತ್ತಡ ಹೆಚ್ಚಿದೆ. ಈ ಸಂಬಂಧ ಪ್ರಧಾನ ಕಾರ್ಯದರ್ಶಿಗಳ ಜತೆ ಚರ್ಚಿಸಿದ್ದೇನೆ. ಲ್ಯಾಬ್ ಆರಂಭಿಸಲು ಬೇಕಾದ ಅಗತ್ಯ ಸೌಲಭ್ಯಗಳ ಬಗ್ಗೆ ಅವರು ವಿವರ ಕೇಳಿದ್ದಾರೆ. ಶೀಘ್ರವೇ ಪ್ರಸ್ತಾವನೆ ಸಲ್ಲಿಸಿ, ಮಂಗಳೂರಿನಲ್ಲಿ ಲ್ಯಾಬ್ ಆರಂಭಿಸಲು ಪ್ರಯತ್ನ ಮಾಡಲಾಗುವುದು" ಎಂದು ಹೇಳಿದ್ದಾರೆ.

ದಕ್ಷಿಣ ಕನ್ನಡ ಸೇರಿದಂತೆ ದಕ್ಷಿಣ ಕರ್ನಾಟಕದ ಅಗತ್ಯತೆಯನ್ನು ಪೂರೈಸಲು ಹಾಸನ ಅಥವಾ ಮಂಗಳೂರಿನಲ್ಲಿ ಲ್ಯಾಬ್ ಆರಂಭಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News