ಹೈದರಾಬಾದ್:‌ ಮುನವ್ವರ್‌ ಫಾರೂಕಿ ಕಾರ್ಯಕ್ರಮಕ್ಕೆ ಬಿಜೆಪಿ ಸಂಸದನಿಂದ ಬೆದರಿಕೆ

Update: 2021-12-25 10:50 GMT
Photo: Facebook

ಭಾರತೀಯ ಜನತಾ ಪಕ್ಷದ ಸಂಸದ ಅರವಿಂದ್ ಧರ್ಮಪುರಿ ಅವರು ಶುಕ್ರವಾರ ಹೈದರಾಬಾದ್‌ನಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನವ್ವರ್‌ ಫಾರೂಕಿ ಅವರ ಮುಂಬರುವ ಕಾರ್ಯಕ್ರಮವನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು Thenewsminute.com ವರದಿ ಮಾಡಿದೆ.

ಈ ವಾರದ ಆರಂಭದಲ್ಲಿ, ಜನವರಿ 9 ರಂದು ತೆಲಂಗಾಣ ರಾಜಧಾನಿಯಲ್ಲಿ ಮುನವ್ವರ್‌ ಫಾರೂಕಿ ಕಾರ್ಯಕ್ರಮ ನಡೆಸುವುದಾಗಿ ಘೋಷಿಸಿದ್ದರು. ರಾಜ್ಯದ ಸಚಿವ ಕೆ.ಟಿ ರಾಮರಾವ್ ಅವರು ಮುನವ್ವರ್‌ ಫಾರೂಕಿ ಮತ್ತು ಮತ್ತೊಬ್ಬ ಹಾಸ್ಯನಟ ಕುನಾಲ್ ಕಮ್ರಾ ಅವರನ್ನು ಹೈದರಾಬಾದ್‌ನಲ್ಲಿ ಪ್ರದರ್ಶನ ನೀಡಲು ಆಹ್ವಾನಿಸಿದ ಕೆಲ ದಿನಗಳ ನಂತರ ಅವರು ಈ ಘೋಷಣೆ ಮಾಡಿದ್ದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಧರ್ಮಪುರಿ, "ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರರಾಗಿರುವ ರಾಮರಾವ್ ಅವರು ಮುನವ್ವರ್‌ ಫಾರೂಕಿಯನ್ನು ಆಹ್ವಾನಿಸಿದ್ದಕ್ಕೆ ನಾಚಿಕೆಯಾಗಬೇಕು. "ಮುನವ್ವರ್‌ ಫಾರೂಕಿ ಯಾರು ಗೊತ್ತಾ?" ಬಹುಸಂಖ್ಯಾತ ಹಿಂದೂಗಳು ಪೂಜಿಸುವ ಸೀತಾ ದೇವಿಯ ಮೇಲೆ ಅವರು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಕರ್ನಾಟಕದಂತಹ ರಾಜ್ಯವು ಅವರನ್ನು ನಿಷೇಧಿಸಿದರೆ, ಕೆಟಿಆರ್ [ಕೆಟಿ ರಾಮರಾವ್] ಅವರನ್ನು ಹಾಸ್ಯ ಮಾಡಲು ತೆಲಂಗಾಣಕ್ಕೆ ಸ್ವಾಗತಿಸಿದ್ದಾರೆ. ಈ ಅಪ್ಪ-ಮಗನಿಗೆ ಹಿಂದೂ ಸಮಾಜ ಕಾಮಿಡಿ ಆಗಿಬಿಟ್ಟಿದೆಯೇ?" ಎಂದು ಪ್ರಶ್ನಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರು, ಗುರುಗ್ರಾಮ್, ರಾಯ್‌ಪುರ, ಸೂರತ್, ಅಹಮದಾಬಾದ್, ವಡೋದರಾ, ಗೋವಾ ಮತ್ತು ಮುಂಬೈನಲ್ಲಿ ಮುನವ್ವರ್‌ ಫಾರೂಕಿಯ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ. ಹಿಂದುತ್ವ ಗುಂಪುಗಳು ಮತ್ತು ಬಿಜೆಪಿ ನಾಯಕರು ಅವರನ್ನು ಜನವರಿಯಲ್ಲಿ ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಬಂಧಿಸಿದಾಗಿನಿಂದ 
ಮುನವ್ವರ್‌ ಫಾರೂಕಿಯನ್ನು ನಿರಂತರವಾಗಿ ಗುರಿಯಾಗಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News