ಪ್ರಕೃತಿ ಮತ್ತು ಧರ್ಮ

Update: 2021-12-26 06:27 GMT

ಎಲ್ಲರೂ ಆಲೋಚಿಸುತ್ತಾರೆ. ಅದು ಅವರ ಸಹಜ ಸ್ವಭಾವ. ಆಲೋಚಿಸುವುದೆಂದರೆ ಮೂರು ಮುಖ್ಯ ಕೆಲಸಗಳನ್ನು ಮಾಡುವುದು. ವಿಚಾರ ಮಾಡುವುದು, ಭಾವಿಸುವುದು ಮತ್ತು ಬಯಸುವುದು. ಈ ಮೂರನ್ನು ಬಳಸಿಕೊಂಡು ವ್ಯಕ್ತಿಯ ಆಲೋಚನೆಗಳು ಬೆಳೆಯುತ್ತಿರುತ್ತವೆ. ಆದರೆ ವ್ಯಕ್ತಿಗಳು ಮಾಡುವ ಆಲೋಚನೆಗಳು ಯಾವ ನೆಲದಲ್ಲಿ ಬೇರುಬಿಟ್ಟಿದೆ ಎಂದು ನೋಡಬೇಕು. ಏಕೆಂದರೆ ಮಾಡುವಂತಹ ಆಲೋಚನೆಗಳು ಪೂರ್ವಾಗ್ರಹ ಪೀಡಿತವಾಗಿವೆಯೇ, ವಿರೂಪವಾಗಿವೆಯೇ, ವಕ್ರವಾಗಿವೆಯೇ, ಪಕ್ಷಪಾತದಿಂದ ಕೂಡಿವೆಯೇ ಅಥವಾ ಕೇಡಿನ ಮೂಲದಿಂದ ಹುಟ್ಟಿಬಂದಿದೆಯೇ ಎಂದೆಲ್ಲಾ ನೋಡಬೇಕಲ್ಲಾ!

ನಮ್ಮ ಬದುಕಿನಲ್ಲಿ ಬಹಳಷ್ಟು ತೊಂದರೆಗಳನ್ನು ಒಡ್ಡುವುದೇ ನಮ್ಮ ಆಲೋಚನೆಗಳು. ಅವೇ ಅನ್ಯಾಯಕ್ಕೆ, ಕ್ರೌರ್ಯಕ್ಕೆ ದಾರಿ ಮಾಡಿಕೊಡುವುದು. ಏಕೆಂದರೆ ಮನಸ್ಸು ಅಂತನ್ನೋದು ಬರೀ ಆಲೋಚಿಸುವುದಿಲ್ಲ. ಅದು ಭಾವಿಸುತ್ತದೆ ಮತ್ತು ಬಯಸುತ್ತದೆ ಕೂಡಾ. ನಮ್ಮ ಆಲೋಚನೆಗಳು ನಮ್ಮ ಭಾವನೆಗಳನ್ನು ಮತ್ತು ಬಯಕೆಗಳನ್ನು ರೂಪುಗೊಳಿಸುತ್ತವೆ ಮತ್ತು ನಿರ್ಧರಿಸುತ್ತವೆ. ನೆನಪಿರಲಿ, ಆಲೋಚನೆಗಳು ಏನನ್ನು ಮತ್ತು ಹೇಗೆ ಭಾವಿಸಬೇಕು ಎಂದು ನಿರ್ಧರಿಸುತ್ತವೆ. ಅಷ್ಟೇ ಅಲ್ಲದೇ ಏನನ್ನು ಪಡೆಯಬೇಕು ಎಂಬುದನ್ನೂ ಕೂಡಾ ಅದು ನಿರ್ಧರಿಸುತ್ತದೆ.

ಆಲೋಚನೆಗಳು ಬಹಳ ಚಲನಶೀಲವಾಗಿರುವವು. ಅವು ಚಲಿಸುತ್ತಾ ಚಲಿಸುತ್ತಾ ಭಾವನೆಗಳನ್ನು ಮತ್ತು ಕಾಮನೆಗಳನ್ನು ತನ್ನ ಅಲೆಗಳೊಂದಿಗೆ ಹೊತ್ತೊಯ್ಯುತ್ತಿರುತ್ತವೆ. ಒಂದು ವೇಳೆ ಸರಿಯಾದ ದಿಕ್ಕಿನಲ್ಲಿ ನಮ್ಮ ಆಲೋಚನೆಗಳು ಹರಿಯುತ್ತಿದ್ದರೆ ಪ್ರಜ್ಞೆಯು ಮತ್ತು ಕೆಲಸವು ಸರಿಯಾದ ದಿಕ್ಕಿಗೆ ಮುಖ ಮಾಡಿರುತ್ತದೆ. ಆಗ ನಮಗೂ ತೊಂದರೆಯಾಗುವುದಿಲ್ಲ ಮತ್ತು ನಮ್ಮಿಂದ ಇತರರಿಗೂ ತೊಂದರೆಯಾಗುವುದಿಲ್ಲ. ಅದೇ ರೀತಿಯಲ್ಲಿ ನಮ್ಮಲ್ಲಿ ಮೂಡುವ ಬಲವಾದ ಭಾವನೆಗಳು ಮತ್ತು ಬಯಕೆಗಳು ಕೂಡಾ ನಮ್ಮ ಆಲೋಚನೆಗಳನ್ನು ಪ್ರಭಾವಿಸಬಲ್ಲವು. ನೀವು ಯಾವುದೋ ಒಂದು ಅಪರಿಚಿತ ಜಾಗಕ್ಕೆ ಹೋಗಿರುತ್ತೀರಿ. ಅಲ್ಲಿ ನಿಮಗೆ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣವೇ ಮೊದಲಾದ ದಿಕ್ಕುಗಳು ಗೊತ್ತಾಗುವುದಿಲ್ಲ. ನೀವು ಬಂದಿದ್ದ ದಾರಿ ಇದಿರಬಹುದು, ಅದಿರಬಹುದು ಅಂತ ಸುಮ್ಮನೆ ಹೋಗುತ್ತಿರುತ್ತೀರಿ. ಏಕೆಂದರೆ ನಿಮಗೆ ಅಲ್ಲಿ ಮಾರ್ಗಸೂಚಿಗಳಿಲ್ಲ.

ನೀವು ಹೋಗಬೇಕಾದ ಜಾಗ ಇಲ್ಲಿಯೇ ಇದೆ ಎಂದೂ ತಿಳಿಯುವುದಿಲ್ಲ. ಒಟ್ಟಿನಲ್ಲಿ ಅಲ್ಲಿ ಇರಲು ಆಗದಲ್ಲಾ, ಅದಕ್ಕೆ ಹೋಗುತ್ತಾ ಇರುತ್ತೀರಿ. ಇದೇ ಕತೆ ನಮ್ಮ ಆಲೋಚನೆಗಳದ್ದು. ಅವೆಷ್ಟು ಚಲನಶೀಲ ಎಂದರೆ ದಿಕ್ಕು ಸರಿ ಇದೆಯೋ ಇಲ್ಲವೋ, ಅದರ ಕಡೆಗೆ ತಲೆ ಕೆಡಿಸಿಕೊಳ್ಳುವುದಕ್ಕಿಂತ ಹೋಗುತ್ತಾ ಇರುವುದು ತನ್ನ ಧರ್ಮವೆಂದೇ ಅದು ಭಾವಿಸುತ್ತದೆ. ಹಾಗಾಗಿ ಹೋಗುತ್ತಲೇ ಇರುವುದರ ಕಡೆಗೆ ಅದರ ಬಯಕೆ. ಹಾಗೆ ಹೋಗುವುದೇ ಮನಸ್ಸಿನ ಸಹಜ ಪ್ರಕೃತಿ. ಅದು ತನ್ನ ಇಚ್ಛೆಯನ್ನು ನೆರವೇರಿಸಿಕೊಳ್ಳಲು ಯತ್ನಿಸುವುದೇ ಅದರ ಧರ್ಮ. ಅದು ಇನ್ನೊಬ್ಬನ ಮನುಷ್ಯನ ಮನೋಧರ್ಮವಾಗಿಲ್ಲದೇ ಇರಬಹುದು.

ಒಬ್ಬ ತನ್ನ ಮನೋಧರ್ಮಕ್ಕೆ ನಡೆದುಕೊಳ್ಳಲು ಯತ್ನಿಸಿದರೆ ಅದು ಮತ್ತೊಬ್ಬನ ಇರುವಿಕೆಯನ್ನೇ ಸಹಿಸದಿರಬಹುದು. ಹಾಗಾಗಿಯೇ ಕಾರುಣ್ಯ, ನೈತಿಕತೆ ಮತ್ತು ಸಹನೆ ಇತ್ಯಾದಿ ಪರಿಕಲ್ಪನೆಗಳು ಹಾಗೂ ಕ್ರಿಯಾಭಾವವನ್ನು ಮೌಲ್ಯವೆಂದು ಪರಿಗಣಿಸಿ ಸ್ಥಾಪಿತ ಧರ್ಮದ ಚೌಕಟ್ಟಿಗೆ ಒಳಪಡಿಸಿದ್ದು ಆ ಜಾಣ ಹಿರಿಯರು. ಆತ್ಮಕೇಂದ್ರಿತ ಮನಸ್ಸುಳ್ಳ ಮನುಷ್ಯನ ಅಂತರಂಗ ಮತ್ತು ಬಹಿರಂಗದಲ್ಲಿ ಸಂಘರ್ಷವಿಲ್ಲದ ಸಹಬಾಳ್ವೆ ಅವರ ಗುರಿ. ಅಂತಹ ಧರ್ಮಗಳಲ್ಲೇ ಸೈರಣೆ, ಸಹಬಾಳ್ವೆ ಇಲ್ಲದಿದ್ದರೆ ಮತ್ತೊಂದು ಧರ್ಮದ ದಾರಿಯನ್ನು ಹಿಡಿಯಬೇಕಾದೀತು. ಜೀವ ಮತ್ತು ಜೀವನದ ಉನ್ನತಿಗೆ ಧರ್ಮ ದಾರಿಯೇ ಹೊರತು ಅದೇನೂ ಗುರಿಯಲ್ಲವಲ್ಲ!

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News