ಎಸ್ಕೆಎಂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ನಾನೂ ರಾಜಕೀಯ ಸೇರುವುದಿಲ್ಲ: ರೈತ ನಾಯಕ ರಾಕೇಶ್ ಟಿಕಾಯತ್

Update: 2021-12-26 16:20 GMT

ಜೈಪುರ, ಡಿ. 26: ಸಂಯುಕ್ತ ಕಿಸಾನ್ ಮೋರ್ಚಾ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ತಾನು ಕೂಡ ರಾಜಕೀಯ ಸೇರುವುದಿಲ್ಲ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ರವಿವಾರ ಹೇಳಿದ್ದಾರೆ. ಫೆಬ್ರವರಿಯಲ್ಲಿ ನಡೆಯಲಿರುವ ಪಂಜಾಬ್ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ರೈತರ ಸಂಘಟನೆಗಳು ಒಗ್ಗಟ್ಟಾಗಿರುವ ಹಾಗೂ ರಾಜಕೀಯ ಪಕ್ಷ ಆರಂಭಿಸಿರುವ ಬಳಿಕ ಟಿಕಾಯತ್ ಈ ಹೇಳಿಕೆ ನೀಡಿದ್ದಾರೆ. 

ಉತ್ತರಪ್ರದೇಶ ವಿಧಾನ ಸಭೆ ಚುನಾವಣೆ ಕುರಿತ ನಿಲುವು ಪ್ರಶ್ನಿಸಿದಾಗ ಟಿಕಾಯತ್, ಮಾದರಿ ನೀತಿ ಸಂಹಿತೆ ಜಾರಿಯಾದ ಬಳಿಕ ತಾನು ಈ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ. ಉತ್ತರಪ್ರದೇಶದಲ್ಲಿ ರೈತರು ಕಿಂಗ್ಮೇಕರ್ ಪಾತ್ರವನ್ನು ವಹಿಸಲಿದ್ದಾರೆ ಎಂದು ಅವರು ಹೇಳಿದರು. 

‘‘ಸಂಯುಕ್ತ ಕಿಸಾನ್ ಮೋರ್ಚಾ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಕೆಲವರು ನಾಲ್ಕು ತಿಂಗಳು ರಜೆಯಲ್ಲಿ ಅಲ್ಲಿಗೆ ಹೋಗಿದ್ದಾರೆ, ಕೆಲವರು ಕಾರ್ಡ್ ಆಡುತ್ತಿದ್ದಾರೆ, ಕೆಲವರು ತಿರುಗಾಡುತ್ತಿದ್ದಾರೆ. ನಾವು ಏನು ಮಾಡಬಹುದು? ನಾಲ್ಕು ತಿಂಗಳ ನಂತರ ಯಾರು ಹೋಗಿದ್ದಾರೆ. ಯಾರು ಏನು ಮಾಡಿದರು ಎಂದು ನಾವು ನೋಡುತ್ತೇವೆ’’ ಎಂದು ಅವರು ಹೇಳಿದರು. 

ರೈತರ ಸಂಘಟನೆ ಪಂಜಾಬ್ ನಲ್ಲಿ ರಾಜಕೀಯ ಪಕ್ಷ ರೂಪಿಸಿದ ಕುರಿತ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟಿಕಾಯತ್, ನಾವು ಜನವರಿ 15ರಂದು ಸಭೆ ನಡೆಸಲಿದ್ದೇವೆ. ಅಲ್ಲದೆ, ಅಂದು ಅದರ ಬಗ್ಗೆ ಮಾತುಕತೆ ನಡೆಸಲಿದ್ದೇವೆ ಎಂದರು. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾ ಕಾರು ಚಲಾಯಿಸಿ ಢಿಕ್ಕಿ ಹೊಡೆದ ಪರಿಣಾಮ ರೈತರು ಸಾವನ್ನಪ್ಪಿದ ಲಖಿಂಪುರಖೇರಿ ಘಟನೆಯ ಕುರಿತು ಬಿಜೆಪಿಯ ನಿಷ್ಕ್ರಿಯತೆಯನ್ನು ರಾಕೇಶ್ ಟಿಕಾಯತ್ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News