ಹರಿದ್ವಾರ ದ್ವೇಷಭಾಷಣ: ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ 76 ವಕೀಲರು, ಜಡ್ಜ್‌ ಗಳಿಂದ ಸಿಜೆಐಗೆ ಪತ್ರ

Update: 2021-12-26 16:10 GMT

ಹೊಸದಿಲ್ಲಿ: "ಮ್ಯಾನ್ಮಾರ್‌ ನಲ್ಲಿ ನಡೆಸಿದ ಹತ್ಯಾಕಾಂಡದಂತೆ ಭಾರತದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರ ನಡೆಸಬೇಕು" ಸೇರಿದಂತೆ ಹಲವು ದ್ವೇಷಪೂರಿತ ಭಾಷಣಗಳನ್ನು ಮಾಡಿದ ಹರಿದ್ವಾರದ ಧರ್ಮ ಸಂಸತ್‌ ನಲ್ಲಿ ಭಾಗವಹಿಸಿದ್ದ ಆರೋಪಿಗಳನ್ನು ಇದುವರೆಗೂ ಬಂಧಿಸಲಾಗಿಲ್ಲ. ವಸೀಂ ರಿಝ್ವಿಯನ್ನು ಉಲ್ಲೇಖಿಸಿ ಮಾತ್ರ ಎಫ್‌ಐಆರ್‌ ಹಾಕಲಾಗಿದ್ದು, ಇದೀಗ ಈ ಎಲ್ಲಾ ದುಷ್ಕರ್ಮಿಗಳ ವಿರುದ್ಧ ಸ್ವಯಂಪ್ರೇರಿತ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಿಗೆ 76 ವಕೀಲರು ಸೇರಿದಂತೆ, ಮಾಜಿ ನ್ಯಾಯಾಧೀಶರು ಪತ್ರ ಬರೆದಿದ್ದಾರೆ.

ಡಿಸೆಂಬರ್‌ 17ರಿಂದ 19ರ ಮಧ್ಯೆ ನಡೆದ ಕಾರ್ಯಕ್ರಮದಲ್ಲಿ ಯತಿ ನರಸಿಂಗಾನಂದ ಸೇರಿದಂತೆ ಹಿಂದೂ ಯುವವಾಹಿನಿ ಎರಡು ಪ್ರತ್ಯೇಕ ಕಾರ್ಯಕ್ರಮಗಳನ್ನು ನಡೆಸಿದ್ದು, ಇದರಲ್ಲಿ ಮುಸ್ಲಿಮರ ವಿರುದ್ಧ ಹತ್ಯಾಕಾಂಡ ನಡೆಸುವಂತೆ ಬಹಿರಂಗವಾಗಿ ಕರೆ ನೀಡಲಾಗಿದೆ. ಇದು ಒಂದಿಡೀ ಸಮುದಾಯವನ್ನು ನಾಶಗೊಳಿಸಲು ನೀಡಿದ ಕರೆಯಾಗಿದೆ. ಕೇವಲ ಸಾಮಾನ್ಯ ದ್ವೇಷ ಭಾಷಣವೂ ಅಲ್ಲ. ಇದು ದೇಶದಲ್ಲಿರುವ ಮಿಲಯನ್‌ ಗಟ್ಟಲೆ ಮುಸ್ಲಿಮರ ಅಸ್ತಿತ್ವದ ಪ್ರಶ್ನೆಯಾಗಿದೆ. ಆದ್ದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ತನಿಖೆ ನಡೆಸಬೇಕೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಯತಿ ನರಸಿಂಗಾನಂದ, ಸಾಗರ್‌ ಸಿಂಧು ಮಹಾರಾಜ್‌, ಧರ್ಮದಾಸ್‌ ಮಹಾರಾಜ್‌, ಪ್ರೇಮಾನಂದ ಮಹಾರಾಜ್‌, ಸಾಧ್ವಿ ಅನ್ನಪೂರ್ಣ ಅಲಿಯಾಸ್‌ ಪೂಜಾ ಶಕುನ್‌ ಪಾಂಡೆ, ಸ್ವಾಮಿ ಆನಂದ ಸ್ವರೂಪ್‌, ಅಶ್ವನಿ ಉಪಾಧ್ಯಾಯ, ಸುರೇಶ್‌ ಚಾವಂಕೆ ಹಾಗೂ ಸ್ವಾಮಿ ಪ್ರಭೋದಾನಂದ ಗಿರಿ ಎಂಬ 9 ಮಂದಿ ಪ್ರಮುಖ ಆರೋಪಿಗಳನ್ನು ಪತ್ರದಲ್ಲಿ ಹೆಸರಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News