ಮಧ್ಯಪ್ರದೇಶ: ವಿಹಿಂಪ ʼಶೌರ್ಯಯಾತ್ರೆʼಯ ಬಳಿಕ ಹಿಂಸಾಚಾರ: 32 ಜನರ ವಿರುದ್ಧ ಪ್ರಕರಣ ದಾಖಲು

Update: 2021-12-26 18:11 GMT
ಸಾಂದರ್ಭಿಕ ಚಿತ್ರ

ಭೋಪಾಲ,ಡಿ.26: ಧಾರ್ ಜಿಲ್ಲೆಯ ಮಾನವರ್ ಪಟ್ಟಣದಲ್ಲಿ ಹಿಂಸಾಚಾರದ ಘಟನೆಗಳ ಬಳಿಕ 30 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಮಧ್ಯಪ್ರದೇಶ ಪೊಲೀಸರು ಮುಸ್ಲಿಂ ವ್ಯಕ್ತಿಯೋರ್ವನಿಗೆ ಸೇರಿದ ಮೂರಂತಸ್ತಿನ ಕಟ್ಟಡವನ್ನು ನೆಲಸಮಗೊಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. 

ಡಿ.23ರಂದು ಬಲಪಂಥೀಯ ಸಂಘಟನೆಗಳಿಂದ ‘ಶೌರ್ಯ ಯಾತ್ರೆ ’ಯ ಬಳಿಕ ಕೋಮು ಘರ್ಷಣೆಗಳ ವದಂತಿಯಿಂದಾಗಿ ಪಟ್ಟಣದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತೆನ್ನಲಾಗಿದೆ.

ಪ್ರಕರಣ ದಾಖಲಾಗಿರುವ ಎಲ್ಲ 30 ಜನರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಪೈಕಿ ಕನಿಷ್ಠ 12 ಜನರನ್ನು ಈವರೆಗೆ ಬಂಧಿಸಲಾಗಿದೆ. ಧಾರ್ ಕೋಮುಸೂಕ್ಷ್ಮ ಜಿಲ್ಲೆಯೆಂದೇ ಕುಖ್ಯಾತಿ ಪಡೆದಿದೆ.

ಡಿ.23ರಂದು ಸಂಜೆ ವಿಹಿಂಪ ಮತ್ತು ಇತರ ಸಂಘಪರಿವಾರ ಸಂಘಟನೆಗಳು ಆಯೋಜಿಸಿದ್ದ ಶೌರ್ಯ ಯಾತ್ರೆ ಮಾನವರ್ ಪಟ್ಟಣದ ಮುಸ್ಲಿಂ ಬಾಹುಳ್ಯದ ಗಾಂಧಿನಗರದ ಮೂಲಕ ಹಾದು ಹೋಗುತ್ತಿದ್ದಾಗ ಸುಮಾರು ಒಂದು ಕಿ.ಮೀ.ದೂರದ ಸಿಂಧಾಬಾ ರೋಡ್ ಮತ್ತು ನಾಲಾ ಪ್ರಾಂಗಣ ಪ್ರದೇಶಗಳಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿದ್ದವು ಎಂದು ಧಾರ್ ಎಸ್ಪಿ ಆದಿತ್ಯ ಪ್ರತಾಪ್ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಧ್ವನಿವರ್ಧಕಗಳನ್ನು ಹೊಂದಿದ್ದ ಯಾತ್ರೆಯ ಮಾರ್ಗವು ಪೂರ್ವನಿಗದಿಯಾಗಿತ್ತು. ಆದರೆ ಹೊಸದಾಗಿ ಸೇರಿದ್ದವರು ಯಾತ್ರೆಯನ್ನು ಇಕ್ಕಟ್ಟಾದ ಮಾರ್ಗದ ಮೂಲಕ ಒಯ್ಯಲು ಪ್ರಯತ್ನಿಸಿದ್ದರು ಮತ್ತು ಈ ಬಗ್ಗೆ ಅವರೊಳಗೆ ಚರ್ಚೆ ನಡೆದಿತ್ತು. ಆದರೆ ಯಾತ್ರೆ ಅಂತ್ಯಗೊಳ್ಳುತ್ತಿದ್ದಂತೆ ಕೋಮು ಘರ್ಷಣೆಗಳು ನಡೆದಿವೆ ಎಂಬ ವದಂತಿಗಳು ಹಬ್ಬಿದ್ದವು. ಇದು ಪಟ್ಟಣದ ಇನ್ನೊಂದು ಭಾಗದಲ್ಲಿ ಕಲ್ಲುತೂರಾಟ ಮತ್ತು ಕೆಲ ಹಿಂಸಾಚಾರದ ಘಟನೆಗಳಿಗೆ ಕಾರಣವಾಗಿತ್ತು ಎಂದರು.

ಯಾತ್ರೆಯಲ್ಲಿ 5,000ದಷ್ಟು ಜನರು ಭಾಗವಹಿಸಿದ್ದರು ಮತ್ತು ಇದೇ ಕಾರಣದಿಂದ ಸಂಘಟಕರು ಯಾತ್ರೆಯನ್ನು ಅಂತ್ಯಗೊಳಿಸಲು ಪೂರ್ವನಿಗದಿತ ಮಾರ್ಗದ ಬದಲು ಹತ್ತಿರದ ಮಾರ್ಗದಲ್ಲಿ ಸಾಗಲು ನಿರ್ಧರಿಸಿದ್ದರು ಎಂದು ಪೊಲೀಸ್ ಉಪವಿಭಾಗಾಧಿಕಾರಿ ಧೀರಜ್ ಬಬ್ಬರ್ ತಿಳಿಸಿದರು. ಆದರೆ,ಪೊಲೀಸರು ಬಲಪ್ರಯೋಗಿಸಿ ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸಿದ್ದರು ಮತ್ತು ಇದು ಪ್ರದೇಶದಲ್ಲಿ ಕೋಮುಘರ್ಷಣೆಯ ವದಂತಿಗಳಿಗೆ ಕಾರಣವಾಗಿತ್ತು ಎಂದು ಪ್ರತ್ಯಕ್ಷದರ್ಶಿಯೋರ್ವರು ಹೇಳಿದರು. ಪೊಲೀಸರಿಂದ ಬಲಪ್ರಯೋಗವನ್ನು ಬಬ್ಬರ್ ನಿರಾಕರಿಸಿದರು.

ಯಾತ್ರೆ ಶಾಂತಿಯುತವಾಗಿ ಅಂತ್ಯಗೊಂಡಿದ್ದರೂ ಪಟ್ಟಣದ ಇನ್ನೊಂದು ಭಾಗದಲ್ಲಿ ಆರೋಪಿಗಳು ರಸ್ತೆ ಬದಿ ನಿಲ್ಲಿಸಲಾಗಿದ್ದ ವಾಹನಗಳ ಮೇಲೆ ಅಪ್ರಚೋದಿತ ಕಲ್ಲುತೂರಾಟವನ್ನು ನಡೆಸಿದ್ದು, ಮಹಿಳೆಯರು ಸೇರಿದಂತೆ ಹಲವರಿಗೆ ಗಾಯಗಳಾಗಿವೆ ಎಂದು ಹೆಚ್ಚುವರಿ ಎಸ್ಪಿ ಧೀರಜ್ ಪಾಟಿದಾರ್ ತಿಳಿಸಿದರು. ಸಂತ್ರಸ್ತರ ದೂರುಗಳ ಮೇರೆಗೆ ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದು,ವೀಡಿಯೊ ಫೂಟೇಜ್‌ಗಳ ಆಧಾರದಲ್ಲಿ ಬಂಧನಗಳನ್ನು ನಡೆಸಲಾಗಿದೆ ಎಂದರು.

ಪೊಲೀಸರು ಇಡೀ ಪ್ರಕರಣದಲ್ಲಿ ದಂಗೆ, ನಿಂದನೆ, ಕೊಲೆಯತ್ನ, ಪಂಕಜ್ ಕುಶ್ವಾಹ ಎಂಬಾತನ ಮನೆಗೆ ಅಕ್ರಮ ಪ್ರವೇಶ ಮತ್ತು ಜೀವ ಬೆದರಿಕೆ,ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಇತ್ಯಾದಿ ಆರೋಪಗಳಲ್ಲಿ ಮೂರು ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದಾರೆ.

ಕುಶ್ವಾಹ್ ನ ಸೋದರಿ ನಾಲಾ ಪ್ರಾಂಗಣದ ಬಳಿ ನಿಂತಿದ್ದ ಕೆಲವರನ್ನು ತನ್ನ ಮೊಬೈಲ್ ಫೋನ್‌ನಲ್ಲಿ ವೀಡಿಯೊ ಚಿತ್ರೀಕರಿಸುತ್ತಿದ್ದಳು. ಇದನ್ನು ಅವರು ಆಕ್ಷೇಪಿಸಿದಾಗ ವಾಗ್ವಾದ ನಡೆದಿತ್ತು. ಆದರೆ ಪೊಲೀಸರು ಮುಸ್ಲಿಂ ವ್ಯಕ್ತಿಗಳ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸ್ಥಳೀಯ ನಿವಾಸಿಯೋರ್ವರು ತಿಳಿಸಿದರು. 30 ಆರೋಪಿಗಳನ್ನು ಪೊಲೀಸರು ಗುರುತಿಸಿದ್ದು,ಇತರ ಹಲವರನ್ನು ಅಪರಿಚಿತರು ಎಂದು ಹೆಸರಿಸಲಾಗಿದೆ.

‘ಎರಡೂ ಕಡೆಗಳಲ್ಲಿ ಅಶಾಂತಿ ಮತ್ತು ಕಲ್ಲುತೂರಾಟಗಳು ನಡೆದಿದ್ದವು. ನಾವು ಪೊಲೀಸರೊಂದಿಗಿದ್ದೇವೆ ಮತ್ತು ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಬಯಸಿದ್ದೇವೆ. ಆದರೆ ಪೊಲೀಸ್ ಕ್ರಮವು ಪಕ್ಷಾತೀತವಾಗಿರಬೇಕು. ನಾವು ಧಾರ್ ಎಸ್ಪಿ ಮತ್ತು ಇಂದೋರ ಐಜಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು,ಪೊಲೀಸ್ ಕ್ರಮವು ಪಕ್ಷಾತೀತವಾಗಿರುತ್ತದೆ ಎಂದು ಅವರು ಭರವಸೆ ನೀಡಿದ್ದರು. ಆದರೆ ಈವರೆಗೆ ಎಫ್‌ಐಆರ್‌ಗಳಲ್ಲಿಯ ಎಲ್ಲ ಆರೋಪಿಗಳು ಮತ್ತು ಬಂಧಿತರು ಮುಸ್ಲಿಮರಾಗಿದ್ದಾರೆ ಎಂದು ಧಾರ್ನ ಶೇರ್-ಎ-ಖಾಜಿ ಜಮೀಲ್ ಸಿದ್ದೀಕಿ ತಿಳಿಸಿದರು.

ಈ ನಡುವೆ ಶನಿವಾರ ಬೆಳಿಗ್ಗೆ ಧಾರ್ ಜಿಲ್ಲಾಡಳಿತವು ಮೂವರು ಆರೋಪಿಗಳು ವಾಸವಿದ್ದ,ಖಲೀಲ್ ಖತ್ರಿ ಎನ್ನುವವರಿಗೆ ಸೇರಿದ ಮೂರಂತಸ್ತಿನ ಕಟ್ಟಡವನ್ನು ನೆಲಸಮಗೊಳಿಸಿದೆ. ‘ಜಿಲ್ಲಾಡಳಿತವು ಕಟ್ಟಡವು ಕಾನೂನುಬದ್ಧವಾಗಿದೆ ಎನ್ನುವುದಕ್ಕೆ 24 ಗಂಟೆಗಳಲ್ಲಿ ದಾಖಲೆಗಳನ್ನು ಸಲ್ಲಿಸುವಂತೆ ತನಗೆ ಶುಕ್ರವಾರ ರಾತ್ರಿ ನೋಟಿಸ್ ನೀಡಿತ್ತು. ನನ್ನ ಹೆಸರಿನಲ್ಲಿ ನೋಂದಣಿ ದಾಖಲೆಯೊಂದಿಗೆ ನಾನು ಅವರ ಬಳಿಗೆ ಧಾವಿಸಿದ್ದೆ,ಆದರೆ ಕಟ್ಟಡ ನಿರ್ಮಾಣದ ಅನುಮತಿ ಇರಲಿಲ್ಲ. ನನ್ನ ಯಾವುದೇ ತಪ್ಪಿಲ್ಲದಿದ್ದರೂ ಕ್ರಿಮಿನಲ್‌ಗಳಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಅವರು ನನ್ನ ಮನೆಯನ್ನು ನೆಲಸಮಗೊಳಿಸಿದ್ದಾರೆ. ಪೋಲಿಸರು ಹೆಸರಿಸಿರುವ ಮೂವರು ಆರೋಪಿಗಳು ನನ್ನ ಬಾಡಿಗೆದಾರರಾಗಿದ್ದು,ತಮ್ಮ ಕುಟುಂಬಗಳೊಂದಿಗೆ ವಾಸವಿದ್ದರು ’ಎಂದು ಹೇಳಿದ ಖತ್ರಿ,ಅವರು ಕಲ್ಲುತೂರಾಟ ಅಥವಾ ಇತರ ಕೃತ್ಯಗಳಲ್ಲಿ ತೊಡಗುತ್ತಾರೆ ಎಂದು ನನಗೆ ಗೊತ್ತಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ತನ್ನ ಹಿರಿಯ ಸೋದರ ಖಾಲಿದ್ ಖತ್ರಿಯನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಉಪವಿಭಾಗೀಯ ದಂಡಾಧಿಕಾರಿ ಶಿವಾಂಗಿ ಜೋಶಿ ಅವರು,‘ಎರಡು ದಿನಗಳ ಹಿಂದೆ ಮಾನವರ್‌ನಲ್ಲಿ ಶಾಂತಿ ಕದಡುವ ಪ್ರಯತ್ನ ನಡೆದಿತ್ತು. ಖತ್ರಿಯ ಮನೆ ನಿರ್ಮಾಣ ಅಕ್ರಮವಾಗಿತ್ತು ಮತ್ತು ಅಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ನಮಗೆ ಮಾಹಿತಿ ಲಭಿಸಿತ್ತು. ಅಲ್ಲಿ ಶಸ್ತ್ರಾಸ್ತ್ರಗಳೂ ಪತ್ತೆಯಾಗಿದ್ದವು. ಹೀಗಾಗಿ ಮನೆಯನ್ನು ನೆಲಸಮಗೊಳಿಸುವ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗಿದೆ ’ಎಂದು ತಿಳಿಸಿದರು.

ಕೃಪೆ : Indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News