ಆದಿತ್ಯನಾಥ್ ಗೆ 'ಬುಲ್ಡೋಜರ್‌ ನಾಥ್' ಎಂದು ಹೆಸರಿಟ್ಟ ಕಾಂಗ್ರೆಸ್ !

Update: 2021-12-27 02:30 GMT
ಆದಿತ್ಯನಾಥ್ (ಫೋಟೊ - PTI)

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಯುವಕರ ಕನಸುಗಳನ್ನು ದಮನಿಸುತ್ತಿದ್ದಾರೆ ಎಂದು ಆಪಾದಿಸಿ ಅವರನ್ನು 'ಬುಲ್ಡೋಜರ್‌ ನಾಥ್' ಅಥವಾ ಬುಲ್ಡೋಜರ್‌ಗಳ ದೇವರು ಎಂದು ಕಾಂಗ್ರೆಸ್ ಅಣಕವಾಡಿದೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾಗಾಂಧಿ ನೇತೃತ್ವದಲ್ಲಿ ಪಕ್ಷ ಹಮ್ಮಿಕೊಳ್ಳಲು ಉದ್ದೇಶಿಸಿದ್ದ 'ಲಡ್ಕಿ ಹೂಂ, ಲಡ್ ಸಕ್ತೀ ಹೂಂ’ ಎಂಬ ಪ್ರಚಾರ ಅಭಿಯಾನ ಮತ್ತು ಐದು ಕಿಲೋಮೀಟರ್ ಓಟಕ್ಕೆ ಸರ್ಕಾರ ಅವಕಾಶ ನಿರಾಕರಿಸಿದ ಬೆನ್ನಲ್ಲೇ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮೂಲಕ ಈ ಟೀಕೆ ಮಾಡಿದೆ.

ಲಕ್ನೋದಲ್ಲಿ ಕಾಂಗ್ರೆಸ್ ಆಯೋಜಿಸಲು ಉದ್ದೇಶಿಸಿದ್ದ ಮ್ಯಾರಾಥಾನ್‌ಗೆ ಅವಕಾಶ ನಿರಾಕರಿಸುವ ಮೂಲಕ ಮುಖ್ಯಮಂತ್ರಿ ಬಾಲಕಿಯರ ಕನಸುಗಳನ್ನು ಹೊಸಕಿ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಆಪಾದಿಸಿದೆ.

"ಬುಲ್ಡೋಜರ್‌ ನಾಥ್ ನೇತೃತ್ವದ ವಿಧ್ವಂಸಕ ಸರ್ಕಾರ, ಪದೇ ಪದೇ ಯುವ ಕನಸುಗಳನ್ನು ಹೊಸಕಿ ಹಾಕುತ್ತಿದೆ. ಕೆಲವೊಮ್ಮೆ ಪ್ರಶ್ನೆ ಪತ್ರಿಕೆಗಳ ಸೋರಿಕೆ ಮೂಲಕ, ಮತ್ತೆ ಕೆಲವು ಬಾರಿ ನೇಮಕಾತಿ ಘೋಷಣೆ ತಡೆಯುವ ಮೂಲಕ ಹಾಗೂ ಮತ್ತೆ ಕೆಲವೊಮ್ಮೆ ಬಲಪ್ರಯೋಗದ ಮೂಲಕ" ಎಂದು ಟ್ವಿಟ್ಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.

"ಈ ಬಾರಿ ಯೋಗಿಯ ಮಹಿಳಾ ವಿರೋಧಿ ಬುಲ್ಡೋಜರ್, ಸಾಹಸಿ ಬಾಲಕಿಯರ ಮೇಲೆ ಹರಿದಾಡಿದೆ" ಎಂದು ಸೇರಿಸಿದೆ. "ಆದರೆ ಒಬ್ಬರ ಸಮಯ ಬಂದಾಗ, ಜಗತ್ತಿನ ಯಾವ ಶಕ್ತಿಯೂ ಅವರನ್ನು ತಡೆಯಲಾಗದು ಎನ್ನುವುದು ಅವರಿಗೆ ಗೊತ್ತಿಲ್ಲ. 'ಲಡ್ಕಿ ಹೂಂ, ಲಡ್ ಸಕ್ತೀ ಹೂಂ' ಇದೀಗ ಇಡೀ ರಾಜ್ಯದಲ್ಲಿ ಅನುರಣಿಸುತ್ತಿದೆ. ಮಹಿಳಾ ಶಕ್ತಿ ಅಧಿಕಾರದ ಹಕ್ಕುಪ್ರತಿಪಾದಿಸಲು ಸಜ್ಜಾಗಿದೆ" ಎಂದು  ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News