ಪ್ರಧಾನಿ ಕ್ಷಮೆ ಯಾಚಿಸುವುದು ನಮಗೆ ಇಷ್ಟವಿಲ್ಲ, ವಿದೇಶದಲ್ಲಿ ಅವರ ಹೆಸರು ಕೆಡಿಸಲು ಬಯಸುವುದಿಲ್ಲ: ಟಿಕಾಯತ್

Update: 2021-12-27 15:16 GMT

ಹೊಸದಿಲ್ಲಿ,ಡಿ.27: ಪ್ರಧಾನಿ ನರೇಂದ್ರ ಮೋದಿಯವರಿಂದ ಕ್ಷಮಾಯಾಚನೆಯನ್ನು ರೈತರು ಬಯಸಿಲ್ಲ,ವಿದೇಶಗಳಲ್ಲಿ ಅವರ ಪ್ರತಿಷ್ಠೆಗೆ ಕಳಂಕ ತರಲೂ ಬಯಸಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಅವರು ಹೇಳಿದ್ದಾರೆ.

‘ಪ್ರಧಾನಿ ಕ್ಷಮೆ ಕೋರಬೇಕು ಎಂದು ನಾವು ಬಯಸಿಲ್ಲ,ವಿದೇಶಗಳಲ್ಲಿ ಅವರ ಪ್ರತಿಷ್ಠೆಗೆ ಕಳಂಕ ತರಲೂ ನಾವು ಬಯಸಿಲ್ಲ. ಯಾವುದೇ ನಿರ್ಧಾರವನ್ನು ರೈತರ ಒಪ್ಪಿಗೆಯನ್ನು ಪಡೆದುಕೊಂಡೇ ತೆಗೆದುಕೊಳ್ಳಲಾಗುವುದು. ನಾವು ಪ್ರಾಮಾಣಿಕವಾಗಿ ಕೃಷಿಯನ್ನು ಮಾಡುತ್ತಿದ್ದೇವೆ,ಆದರೆ ಕೇಂದ್ರವು ನಮ್ಮ ಬೇಡಿಕೆಗಳಿಗೆ ಗಮನವನ್ನು ನೀಡಿರಲಿಲ್ಲ’ಎಂದು ಟಿಕಾಯತ್ ರವಿವಾರ ಟ್ವೀಟಿಸಿದ್ದಾರೆ.

ರದ್ದುಗೊಂಡಿರುವ ಮೂರು ಕೃಷಿ ಕಾಯ್ದೆಗಳ ಕುರಿತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು,ಸಚಿವರ ಹೇಳಿಕೆಯು ರೈತರನ್ನು ವಂಚಿಸುವ ಉದ್ದೇಶವನ್ನು ಹೊಂದಿದೆ ಮತ್ತು ಅದು ಪ್ರಧಾನಿಯವರನ್ನೂ ಅವಮಾನಿಸುತ್ತದೆ ಎಂದಿದ್ದಾರೆ.

ನಾಗ್ಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಕೃಷಿ ಕಾಯ್ದೆಗಳ ರದ್ದತಿಯನ್ನು ಪ್ರಸ್ತಾಪಿಸಿದ್ದ ತೋಮರ್,‘ನಾವು ಒಂದು ಹೆಜ್ಜೆ ಹಿಂದೆ ಸರಿದಿದ್ದೇವೆ,ಆದರೆ ನಾವು ಮತ್ತೆ ಮುನ್ನುಗ್ಗುತ್ತೇವೆ ’ಎಂದು ಹೇಳಿದ್ದರು.

ಕೃಷಿ ಕಾಯ್ದೆಗಳನ್ನು ಮತ್ತೆ ತರುವ ಯೋಜನೆ ಕೇಂದ್ರಕ್ಕಿಲ್ಲ ಎಂದು ಬಳಿಕ ಸ್ಪಷ್ಟನೆ ನೀಡಿದ್ದ ಅವರು,ತನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸಮಜಾಯಿಷಿಯನ್ನು ನೀಡಿದ್ದರು.

ಕೇಂದ್ರವು ಕೃಷಿ ಕಾಯ್ದೆಗಳನ್ನು ಮರಳಿ ತಂದರೆ ಪ್ರತಿಭಟನೆಯನ್ನು ಪುನರಾರಂಭಿಸುವುದಾಗಿ ಟಿಕಾಯತ್ ಬೆದರಿಕೆಯೊಡ್ಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News