ಚಂಡೀಗಡ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ: ಬಿಜೆಪಿ,ಕಾಂಗ್ರೆಸ್ ಅನ್ನು ಹಿಂದಿಕ್ಕಿದ ಆಮ್ ಆದ್ಮಿ ಪಕ್ಷ

Update: 2021-12-27 07:28 GMT

ಚಂಡೀಗಢ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಒಂಬತ್ತು ಸ್ಥಾನಗಳನ್ನು ಗೆದ್ದಿದೆ. ಪ್ರತಿಸ್ಪರ್ಧಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗಿಂತ ಮುಂದಿದೆ ಎಂದು NDTV ವರದಿ ಮಾಡಿದೆ.

ಬಿಜೆಪಿ ಆರು ಹಾಗೂ  ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದಿವೆ.

ಇಲ್ಲಿಯವರೆಗೆ ಪ್ರಕಟವಾದ ಫಲಿತಾಂಶಗಳ ಪ್ರಕಾರ ಮೇಯರ್ ಬಿಜೆಪಿಯ ರವಿಕಾಂತ್ ಶರ್ಮಾ ಅವರು ಎಎಪಿ ಅಭ್ಯರ್ಥಿ ದಮನ್‌ಪ್ರೀತ್ ಸಿಂಗ್ ಅವರನ್ನು ಸೋಲಿಸಿದ್ದಾರೆ. ಪಂಜಾಬ್ ಹಾಗೂ ಹರ್ಯಾಣದ ರಾಜಧಾನಿ ಚಂಡೀಗಢದಲ್ಲಿ 35 ಹೊಸ ಮುನ್ಸಿಪಲ್ ಕೌನ್ಸಿಲರ್‌ಗಳಿಗೆ ಶುಕ್ರವಾರ ಚುನಾವಣೆ ನಡೆದಿತ್ತು.

ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಮೊದಲ ಬಾರಿಗೆ ಎಎಪಿ ಸ್ಪರ್ಧಿಸಿದ್ದು,ಎಎಪಿ ಸಾಧನೆಯು ಮುನ್ಸಿಪಲ್ ನಲ್ಲಿ  ಬಹುಮತ ಹೊಂದಿರುವ ಬಿಜೆಪಿಗೆ ಅಚ್ಚರಿ ಮೂಡಿಸಿದೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ 20 ಹಾಗೂ  ಅದರ ಹಿಂದಿನ ಮಿತ್ರಪಕ್ಷ ಅಕಾಲಿದಳ ಒಂದು ಸ್ಥಾನವನ್ನು ಗೆದ್ದಿತ್ತು. ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಗೆದ್ದಿತ್ತು.

ಈ ಬಾರಿಯ ಚುನಾವಣೆಯು ಪಂಜಾಬ್‌ನ ಆಡಳಿತಾರೂಢ ಕಾಂಗ್ರೆಸ್, ಎಎಪಿ, ಬಿಜೆಪಿ ಹಾಗೂ ಅಕಾಲಿದಳ-ಬಿಎಸ್‌ಪಿ ಮೈತ್ರಿಕೂಟದ ನಡುವಿನ ಚತುಷ್ಕೋನ ಸ್ಪರ್ಧೆಯಾಗಿದೆ.

ಸಾಂಪ್ರದಾಯಿಕವಾಗಿ ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಮಹಾನಗರಪಾಲಿಕೆಯ ಚುನಾವಣೆ ಯಲ್ಲಿ ಬಿಜೆಪಿ ಹಾಗೂ  ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇರುತ್ತಿತ್ತು. ಪ್ರಸ್ತುತ ನಗರಪಾಲಿಕೆಯಲ್ಲಿ ಬಿಜೆಪಿಗೆ ಬಹುಮತವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News