×
Ad

​ಚಂಡಿಗಢ ಚುನಾವಣೆ: ಪಾದಾರ್ಪಣೆಯಲ್ಲೇ ಅತಿಹೆಚ್ಚು ಸೀಟ್‌ ಗೆದ್ದ ಆಪ್, ಬಿಜೆಪಿ ಮೇಯರ್‌ ಸೇರಿದಂತೆ ಹಲವರಿಗೆ ಸೋಲು

Update: 2021-12-27 14:56 IST

ಚಂಡೀಗಢ: ಪಂಜಾಬ್ ಚುನಾವಣೆಗೆ ಮುನ್ನ, ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ಚಂಡೀಗಢದಲ್ಲಿ ಇಂದು ಭರ್ಜರಿ ಚೊಚ್ಚಲ ಪ್ರವೇಶ ಮಾಡಿದ್ದು, ನಗರ ಪಾಲಿಕೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದು ಬಿಜೆಪಿಯನ್ನು ಎರಡನೇ ಸ್ಥಾನಕ್ಕೆ ತಳ್ಳಿದೆ. ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಪಂಜಾಬ್ ಮತದಾನಕ್ಕೆ ಮುಂಚಿತವಾಗಿ ಆಮ್‌ಆದ್ಮಿ ಪಕ್ಷ ಇದನ್ನು "ಟ್ರೇಲರ್" ಎಂದು ಕರೆದಿದೆ.

ಆಪ್ 35 ಮುನ್ಸಿಪಲ್ ಸ್ಥಾನಗಳಲ್ಲಿ 14 ಸ್ಥಾನಗಳನ್ನು ಗೆದ್ದುಕೊಂಡರೆ, ಬಿಜೆಪಿ 12 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಎಂಟು ಸ್ಥಾನಗಳನ್ನು ಗೆದ್ದಿದೆ ಮತ್ತು ಅಕಾಲಿದಳ ಒಂದು ಸ್ಥಾನದಲ್ಲಿ ಉಳಿದಿದೆ. ಪಂಜಾಬ್ ಮತ್ತು ಹರಿಯಾಣದ ರಾಜಧಾನಿ ಚಂಡೀಗಢದಲ್ಲಿ ಶುಕ್ರವಾರ ಚುನಾವಣೆ ನಡೆದಿತ್ತು.

"ಚಂಡೀಗಢ ಚುನಾವಣೆ ಟ್ರೇಲರ್ ಆಗಿದೆ, ಪಂಜಾಬ್ ಸಂಪೂರ್ಣ ಚಲನಚಿತ್ರವಾಗಲಿದೆ. ಚಂಡೀಗಢದ ಮನಸ್ಥಿತಿ ಪಂಜಾಬ್‌ನಲ್ಲಿದೆ. ಎಲ್ಲರೂ ಆಪ್‌ಗೆ ಮತ ಹಾಕುತ್ತಿದ್ದಾರೆ. ಜನರು ಅರವಿಂದ್ ಕೇಜ್ರಿವಾಲ್‌ಗೆ ಅವಕಾಶ ನೀಡಲು ನಿರ್ಧರಿಸಿದ್ದಾರೆ ಎಂದು ಆರಂಭಿಕ ಪ್ರವೃತ್ತಿಗಳು ಸಾಬೀತುಪಡಿಸುತ್ತವೆ" ಎಂದು ಎಎಪಿಯ ರಾಘವ್ ಚಡ್ಡಾ ಹೇಳಿದ್ದಾರೆ. 

ಬಿಜೆಪಿಗೆ ಭಾರಿ ಹಿನ್ನಡೆಯಾಗಿದ್ದು,  ಮೇಯರ್ ರವಿಕಾಂತ್ ಶರ್ಮಾ ಮತ್ತು ಮಾಜಿ ಮೇಯರ್ ದವೇಶ್ ಮೌದ್ಗಿಲ್ ಇಬ್ಬರೂ ಎಎಪಿ ಅಭ್ಯರ್ಥಿಗಳಿಂದ ಸೋತಿದ್ದಾರೆ. ಎಎಪಿಯ ಚುನಾವಣಾ ಪ್ರಚಾರ ಸಮಿತಿ ಮುಖ್ಯಸ್ಥ ಚಂದರ್ ಮುಖಿ ಶರ್ಮಾ ಕೂಡ ಸೋಲನುಭವಿಸಿದ್ದಾರೆ.

"ಬಿಜೆಪಿಯ ಮತದಾರರು ತಮ್ಮ ನಿಷ್ಠೆಯನ್ನು ಎಂದಿಗೂ ಬದಲಾಯಿಸದ ಕಾರಣ ಯಾವ ಪಕ್ಷದ ಮತಗಳು ಎಎಪಿಗೆ ಬದಲಾಗಿದೆ ಎಂಬುದನ್ನು ಅಂತಿಮ ಫಲಿತಾಂಶಗಳು ತೋರಿಸುತ್ತವೆ" ಎಂದು ಬಿಜೆಪಿಯ ಚಂಡೀಗಢ ವಕ್ತಾರ ನರೇಶ್ ಅರೋರಾ ಹೇಳಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳನ್ನು ಗಳಿಸಿತ್ತು ಮತ್ತು ಅಂದಿನ ಮಿತ್ರಪಕ್ಷ ಅಕಾಲಿದಳ ಒಂದೇ ಸ್ಥಾನವನ್ನು ಪಡೆದಿತ್ತು. ಬಿಜೆಪಿ-ಅಕಾಲಿದಳದ ಪ್ರತಿಸ್ಪರ್ಧಿ ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಗೆದ್ದಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News