×
Ad

ದ್ವೇಷ ಭಾಷಣ, ಚರ್ಚ್ ಗಳ ಮೇಲೆ ದಾಳಿ: ಬಿಜೆಪಿಗೆ ಕಾಂಗ್ರೆಸ್ ತರಾಟೆ

Update: 2021-12-27 21:13 IST

ಹೊಸದಿಲ್ಲಿ, ಡಿ. 27: ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಚರ್ಚ್ ಗಳ ಮೇಲೆ ದಾಳಿಯುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಪ್ರಶ್ನಿಸಿದೆ. 

‘‘ಹರಿದ್ವಾರದ ದ್ವೇಷ ಭಾಷಣ, ಚರ್ಚ್ ಗಳ ಮೇಲೆ ದಾಳಿ, ಧರ್ಮದ ಹೆಸರಿನಲ್ಲಿ ಹತ್ಯೆ ಸಮಾಜ ಹಾಗೂ ರಾಜಕೀಯ ಕುಸಿಯುತ್ತಿರುವ ಲಕ್ಷಣವಾಗಿದೆ. ಹಿಂದುತ್ವವಾದಿಗಳು ಬರ್ಬರತೆ ತೋರಿಸುತ್ತಿದ್ದಾರೆ. ಪ್ರಜಾಪ್ರಭುತ್ವ ತ್ವರಿತವಾಗಿ ಹೇಗೆ ಕುಸಿಯುತ್ತದೆ ಎಂಬುದಕ್ಕೆ ಭಾರತ ಉದಾಹರಣೆಯಾಗುತ್ತಿದೆ’’ ಎಂದು ರಾಜ್ಯ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ. 

ಹರಿದ್ವಾರದ ದ್ವೇಷ ಭಾಷಣವನ್ನು ಉಲ್ಲೇಖಿಸಿದ ಕೇಂದ್ರದ ಮಾಜಿ ಗೃಹ ಸಚಿವ ಪಿ. ಚಿದಂಬರಂ ಕೂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಏಸು ಕ್ರಿಸ್ತನ ಬೋಧನೆಗಳನ್ನು ಜನರಿಗೆ ಉಪದೇಶಿಸಿದ ದಿನ ಹರ್ಯಾಣದ ಖಾಸಗಿ ಶಾಲೆಯಲ್ಲಿ ನಡೆದ ಕ್ರಿಸ್ಮಸ್ ಆಚರಣೆಗೆ ದುಷ್ಕರ್ಮಿಗಳು ಅಡ್ಡಿ ಉಂಟು ಮಾಡಿದ್ದಾರೆ. ಈ ದುಷ್ಕರ್ಮಿಗಳು ಯಾರು ? ದುಷ್ಕರ್ಮಿಗಳು ‘ಜೈ ಶ್ರೀರಾಮ್’ ಹಾಗೂ ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗಿದ್ದರು ಎಂದು ವರದಿ ಹೇಳಿದೆ ಎಂದು ಅವರು ತಿಳಿಸಿದರು. 

ಮರುದಿನ ಅಸ್ಸಾಂನ ಚರ್ಚ್ನಲ್ಲಿ ನಡೆಯುತ್ತಿರುವ ಸೇವೆಗೆ ದುಷ್ಕರ್ಮಿಗಳು ಅಡ್ಡಿಪಡಿಸಿದ್ದಾರೆ. ಪ್ರಧಾನಿ ಅವರು ಜನರಿಗೆ ಉಪದೇಶಿಸುವ ಬದಲು ದುಷ್ಕರ್ಮಿಗಳನ್ನು ಗುರುತಿಸಲು ಹರ್ಯಾಣ ಹಾಗೂ ಬಿಜೆಪಿ ಸರಕಾರಕ್ಕೆ ನಿರ್ದೇಶಿಸಬೇಕು ಹಾಗೂ ಅವರನ್ನು ನ್ಯಾಯಾಲಯದ ಮುಂದೆ ತರಬೇಕು. ಜೀಸಸ್ ಕ್ರೈಸ್ತನ ಬೋಧನೆಯನ್ನು ಹಿಂದುತ್ವ ಬ್ರಿಗೇಡ್ ಗೆ ಉಪದೇಶಿಸಬೇಕು ಎಂದು ಚಿದಂಬರಂ ರವಿವಾರ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News