×
Ad

ಮಾಹಿತಿಗಾಗಿ ಇಂತಹವರನ್ನು ನಂಬಿದವರ ಗತಿ ಏನು?

Update: 2021-12-28 09:55 IST

ಆಕ್ರಮಣಕಾರಿ ದೊರೆ ಚೆಂಗೀಸ್ ಖಾನ್ (1162ರಿಂದ 1227) ಮುಸಲ್ಮಾನನಾಗಿದ್ದ ಮಾತ್ರವಲ್ಲ ಅವನು ನಡೆಸಿದ ರಕ್ತಪಾತಗಳಿಗೆಲ್ಲಾ ಇಸ್ಲಾಮ್ ಧರ್ಮ ಮತ್ತು ಇಸ್ಲಾಮಿನ ಧರ್ಮಗ್ರಂಥವೇ ಪ್ರೇರಣೆಯಾಗಿತ್ತು ಎಂದು ಬೆಳಗೆರೆ ಆರೋಪಿಸಿದ್ದಾರೆ !!! ಹೀಗೆ ಹೇಳುವ ಮೂಲಕ ಅವರು ಚೆಂಗೀಸ್ ಖಾನ್ ಎಸಗಿದ ಎಲ್ಲ ಅಮಾನುಷ ಕ್ರೌರ್ಯಗಳ ಹೊರೆಯನ್ನು ಮುಸ್ಲಿಮ್ ಸಮಾಜ ಮತ್ತು ಇಸ್ಲಾಮ್ ಧರ್ಮದ ಮೇಲೆ ಹೊರಿಸಿ ಬಿಟ್ಟಿದ್ದಾರೆ. ನಿಜವಾಗಿ ಇದು ಇತಿಹಾಸದ ಮೇಲೆ ರವಿಬೆಳಗೆೆ ನಡೆಸಿದ ಭೀಕರ ಅತ್ಯಾಚಾರವಾಗಿದೆ.

ಕರ್ನಾಟಕದಲ್ಲಿ ಒಂದಾನೊಂದು ಕಾಲದಲ್ಲಿ ಪತ್ರಕರ್ತರಾಗಿದ್ದು ಆಬಳಿಕ ಯಾವ್ಯಾವುದೋ ಕಾರಣಗಳಿಗಾಗಿ ಕುಖ್ಯಾತರಾಗಿದ್ದ ರವಿ ಬೆಳಗೆರೆ ಎಂಬೊಬ್ಬರು ಮುಸ್ಲಿಮರ ಕುರಿತು ಒಂದು ಪುಸ್ತಕ ಬರೆದಿದ್ದಾರೆ. ಪುಸ್ತಕದ ಶೀರ್ಷಿಕೆ ‘ಮುಸ್ಲಿಮ್’. ಅದು ಹಲವು ವರ್ಷಗಳಿಂದ ಮಾರುಕಟ್ಟೆಯಲ್ಲಿದೆ. ಸಾವಿರಾರು ಓದುಗರಿಗೆ ತಲುಪಿದೆ. ಮುಸ್ಲಿಮರ ಕುರಿತು ಮಾಹಿತಿ ಪಡೆಯಲು ಇಂತಹ ಪುಸ್ತಕಗಳನ್ನು ಮತ್ತು ಇಂತಹ ಬರಹಗಾರರನ್ನು ನಂಬಿದವರು ಯಾವ ರೀತಿ ಮೋಸ ಹೋಗಿ ಮೂರ್ಖರಾಗಿ ಬಿಡುತ್ತಾರೆಂಬುದಕ್ಕೆ ಒಂದು ಪುಟ್ಟ ಉದಾಹರಣೆ ಇಲ್ಲಿದೆ:

ಪುಸ್ತಕದ ಮುಖಪುಟದಲ್ಲಿ ‘ಮುಸ್ಲಿಮ್’ ಎಂಬ ಶೀರ್ಷಿಕೆ ಮತ್ತು ‘ಅದು ದೈವ ಸೈನಿಕರ ಲೋಕ’ ಎಂಬ ಉಪ ಶೀರ್ಷಿಕೆ ಇದೆ. ಜೊತೆಗೆ ಭಾರೀ ಅತ್ಯಾಧುನಿಕ ಬಂದೂಕನ್ನು ಹಿಡಿದು ಆಕ್ರಮಣಕ್ಕೆ ಸಜ್ಜಾಗಿ ನಿಂತಿರುವ ಅಫ್ಘಾನಿಸ್ತಾನದ ಒಬ್ಬ ತಾಲಿಬಾನ್ ಯೋಧನ ಫೋಟೊ ಇದೆ. ಮುಸ್ಲಿಮರ ಕುರಿತು ಮಾಹಿತಿಗಾಗಿ ಪುಸ್ತಕ ಕೈಗೆತ್ತಿಕೊಳ್ಳುವವನಿಗೆ ಪ್ರಥಮವಾಗಿ ಕಾಣುವ ಈ ಚಿತ್ರವು, ಅವನ ಮನದಲ್ಲಿ ಮುಸ್ಲಿಮರನ್ನು ಯುದ್ಧ, ಹಿಂಸೆ ಮತ್ತು ಭಯೋತ್ಪಾದನೆಯ ಜೊತೆ ಜೋಡಿಸುವ ಕಲ್ಪನೆಯೊಂದನ್ನು ಮೂಡಿಸುತ್ತದೆ. ಆ ಬಳಿಕ ಪುಸ್ತಕದ ಪುಟಗಳನ್ನು ತೆರೆಯುತ್ತಾ ಹೋದಂತೆ, ತೀರಾ ನಾಟಕೀಯವಾದ ಭಾಷೆಯಲ್ಲಿ ರಂಗುರಂಗಾಗಿ ಬರೆಯಲಾದ ಸುಳ್ಳುಗಳ ಸರಮಾಲೆ ಓದುಗನ ಮುಂದೆ ತೆರೆದುಕೊಳ್ಳುತ್ತದೆ. ಮುಸ್ಲಿಮರ ಇತಿಹಾಸವೆಂದರೆ ಕೇವಲ ರಕ್ತಪಾತ, ಜನಾಂಗ ಹತ್ಯೆ ಮತ್ತು ಸಾಮೂಹಿಕ ಹತ್ಯಾಕಾಂಡಗಳ ಇತಿಹಾಸ ಎಂದು ಓದುಗರು ತೀರ್ಮಾನಿಸಿ ಬಿಡುವಂತಾಗುತ್ತದೆ.

ಬೆಳಗೆರೆಯ ರೈಲು ಚಲಿಸುವ ವೈಖರಿ ನೋಡಿ:

‘‘ತೇಮೂಜಿನ್ ಎಂಬ ಕುರೂಪಿ ಹುಡುಗನೊಬ್ಬ 1162ರಲ್ಲಿ ಹುಟ್ಟಿದ್ದ. ಚಿಕ್ಕ ಕಣ್ಣು, ಹರುಕು ಹುಬ್ಬು, ಅಗಲ ಹಣೆ, ಗಂಟು ಮೂಗು, ವಿಕಾರ ಬಾಯಿ, ದೊಡ್ಡ ಕಿವಿ ಅವನಿಗಿದ್ದವು. ಬೆಳೆಯುತ್ತ ಬೆಳೆಯುತ್ತ ಕೆಂಡ ಸಿಟ್ಟಿನ ಯೋಧನಾಗಿ ಬಿಟ್ಟ. ಗೋಬಿ ಮರುಭೂಮಿಯಿಂದ ಒಂದು ಸೇನೆ ಕಟ್ಟಿಕೊಂಡು ಹೊರಟವನು ಚೀನಾದಂತಹ ಚೀನಾವನ್ನು ತತ್ತರಿಸಿ ಪಾಹಿ ಪಾಹಿ, ದೇಹಿ ದೇಹಿ ಎಂಬಂತೆ ಮಾಡಿಬಿಟ್ಟ. ದಂಗು ಬಡಿದು ನಿಬ್ಬೆರಗಾದ ಜನ ಮಂಗೋಲ್ ಮೂಲದ ತೇಮೂಜಿನ್ ಎಂಬ ಈ ಮುಸಲ್ಮಾನ ಹುಡುಗನಿಗೆ ಪಟ್ಟಕಟ್ಟಿ ಹೊಸ ಹೆಸರಿಟ್ಟರು. ನೀನು ಸಮಸ್ತ ಜನತೆಯ ದೊರೆ ಚೆಂಗೀಸ್ ಖಾನ್ ಅಂತ ಸ್ತುತಿಸಿದರು. ಆದರೆ ಚೆಂಗೀಸ್‌ಗೆ ಅಲ್ಲಿಗೇ ತೃಪ್ತಿಯಾಗಿರಲಿಲ್ಲ. ಅವನಿಗೆ ಅಲೆಕ್ಸಾಂಡರನಂತೆ ಇಡೀ ವಿಶ್ವ ಗೆಲ್ಲುವ ಆಸೆ ಮೊಳಕೆಯೊಡೆದಿತ್ತು. ........ ಅದ್ಯಾವ ರಭಸದಿಂದ ಅವನು ಈ ಮರುಭೂಮಿಯೊಳಕ್ಕೆ ನುಗ್ಗಿ ಬಂದನೆಂದರೆ, ಎದುರಿಗೆ ಸಿಕ್ಕ ಪ್ರತಿ ಮನುಷ್ಯಾಕೃತಿಯನ್ನೂ ನಿಲ್ಲಿಸಿ ನಿರ್ದಯವಾಗಿ ತಲೆ ಕಡಿದುಹಾಕಿದ ...............ಒಬ್ಬ ಮೂರ್ಖ ಸಾಮಂತ ಮಾಡಿದ ತಪ್ಪಿಗೆ ಚೆಂಗೀಸ್ ಖಾನನ ರಕ್ತಪಿಪಾಸು ಸೈನ್ಯ 1221ರ ಹೊತ್ತಿಗೆ ಇಡೀ ಮಧ್ಯ ಏಶ್ಯದ ಎಲ್ಲ ಸಾಮ್ರಾಜ್ಯಗಳನ್ನೂ ಬೆಂಕಿ ಹಚ್ಚಿ ನಾಶಪಡಿಸಿ ಬಿಟ್ಟಿತು. ಅನಾಗರಿಕ ಯುದ್ಧಕೋರ ಚೆಂಗೀಸ್ ಖಾನನಿಗೆ ಪ್ರೋದ್ಬಲವಾಗಿ ನಿಂತಿದ್ದುದು ಅದೇ ಇಸ್ಲಾಮ್‌ನ ದೈವ ವಾಕ್ಕು.’’

  ಒಬ್ಬ ಮುಸ್ಲಿಮನ ಹತ್ಯೆಯಾದರೆ ತಕ್ಷಣ ಸೇಡುತೀರಿಸಿಕೋ. ಮುಸ್ಲಿಮನನ್ನು ಇನ್ನೊಬ್ಬ ಮುಸ್ಲಿಮನೇ ಕೊಂದು ಹಾಕಿದನೆಂದರೆ, ಹಾಗೆ ಕೊಂದವನನ್ನು ಮರಣದಂಡನೆಗೆ ಈಡು ಮಾಡಬಹುದಾದ ಹಕ್ಕು ಸತ್ತವನ ಕುಟುಂಬಕ್ಕಿರುತ್ತದೆ. ಅಕಸ್ಮಾತ್ ಆ ಕುಟುಂಬ ಹಂತಕನನ್ನು ಕ್ಷಮಿಸಬಯಸಿದರೆ ಕ್ಷಮಿಸಲೂಬಹುದು. ಆದರೆ ಕೊಂದವನು ಮುಸ್ಲಿಮನಲ್ಲದೆ ಬೇರೆ ಯಾವುದೇ ಜಾತಿಯವನಾಗಿದ್ದರೂ ಅವನಿಗೆ ಕ್ಷಮೆ ನೀಡಕೂಡದು. ಮುಸ್ಲಿಮನ ಹತ್ಯೆಗೆ ಅದ್ಯಾವ ಮಟ್ಟದ ಸೇಡನ್ನಾದರೂ ತೀರಿಸಿಕೊಳ್ಳಬಹುದು! ಹಾಗನ್ನುತ್ತದೆ ಇಸ್ಲಾಮ್. ಚೆಂಗೀಸ್ ಖಾನ್ ಅದರ ಆಧಾರದ ಮೇಲೆಯೇ ಸೇಡು ತೀರಿಸಿಕೊಂಡ. ಒಂದು ಕಡೆ ರಾಜ್ಯ ದಾಹ, ಇನ್ನೊಂದು ಕಡೆ ಧರ್ಮದ ಅಪ್ಪಣೆಗಳು. ಮನುಷ್ಯನನ್ನು ರಾಕ್ಷಸನನ್ನಾಗಿ ಮಾಡಲಿಕ್ಕೆ ಬೇರೇನು ಬೇಕು? ಚೆಂಗೀಸ್‌ನ ಹೊಡೆತಕ್ಕೆ ಇಡೀ ಅಫ್ಘಾನಿಸ್ತಾನ ತತ್ತರಿಸಿ ಹೋಯಿತು. ಅವನು ಏನಿಲ್ಲವೆಂದರೂ ಐದು ಲಕ್ಷ ಜನರ ಹತ್ಯೆ ಮಾಡಿದ್ದ. ಹೇಗಿದೆ ರವಿ ಬೆಳಗೆರೆಯ ಬ್ರೇಕಿಲ್ಲದ ರೈಲು? ಆಕ್ರಮಣಕಾರಿ ದೊರೆ ಚೆಂಗೀಸ್ ಖಾನ್ (1162ರಿಂದ 1227) ಮುಸಲ್ಮಾನನಾಗಿದ್ದ ಮಾತ್ರವಲ್ಲ ಅವನು ನಡೆಸಿದ ರಕ್ತಪಾತಗಳಿಗೆಲ್ಲಾ ಇಸ್ಲಾಮ್ ಧರ್ಮ ಮತ್ತು ಇಸ್ಲಾಮಿನ ಧರ್ಮಗ್ರಂಥವೇ ಪ್ರೇರಣೆಯಾಗಿತ್ತು ಎಂದು ಬೆಳಗೆರೆ ಆರೋಪಿಸಿದ್ದಾರೆ !!!

ಹೀಗೆ ಹೇಳುವ ಮೂಲಕ ಅವರು ಚೆಂಗೀಸ್ ಖಾನ್ ಎಸಗಿದ ಎಲ್ಲ ಅಮಾನುಷ ಕ್ರೌರ್ಯಗಳ ಹೊರೆಯನ್ನು ಮುಸ್ಲಿಮ್ ಸಮಾಜ ಮತ್ತು ಇಸ್ಲಾಮ್ ಧರ್ಮದ ಮೇಲೆ ಹೊರಿಸಿ ಬಿಟ್ಟಿದ್ದಾರೆ. ನಿಜವಾಗಿ ಇದು ಇತಿಹಾಸದ ಮೇಲೆ ರವಿಬೆಳಗೆರೆ ನಡೆಸಿದ ಭೀಕರ ಅತ್ಯಾಚಾರವಾಗಿದೆ. ಬಹುಶ: ಅವರು, ಶಾರುಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್ ಮುಂತಾದ ಬಾಲಿವುಡ್ ನ ಕೆಲವು ಮುಸ್ಲಿಮ್ ಸಿನೆಮಾ ತಾರೆಯರ ಹೆಸರ ಜೊತೆ ‘ಖಾನ್’ ಎಂಬ ಕುಲನಾಮ ಇರುವುದನ್ನು ಕಂಡು ಈ ಕುಲನಾಮ ಉಳ್ಳವರೆಲ್ಲಾ ಮುಸ್ಲಿಮರೇ ಆಗಿರಬೇಕೆಂದು ನಂಬುವ ಪೆದ್ದುತನ ತೋರಿರಬೇಕು ಅಥವಾ ಅವರು 13ನೇ ಶತಮಾನದ ಮೊಂಗೋಲ್ (Mongol) ಸಾಮ್ರಾಜ್ಯ ಮತ್ತು 16ನೇ ಶತಮಾನದ ಮೊಗಲ್ (Mughal) ಸಾಮ್ರಾಜ್ಯ ಇವೆರಡೂ ಒಂದೇ ಎಂದು ಅಪಾರ್ಥ ಮಾಡಿಕೊಂಡಿರಬಹುದು.

ಕೆಲವೊಮ್ಮೆ ಸಣ್ಣ ಮಕ್ಕಳು ಮೊಂಗೋಲ್ ಮತ್ತು ಮೊಗಲ್ ಎಂಬ ತೀರಾ ಭಿನ್ನವಾದ ಎರಡು ಪದಗಳನ್ನು ಒಂದೇ ಎಂದು ಭಾವಿಸುವುದುಂಟು. ಅದಲ್ಲವಾದರೆ, 16ನೇ ಶತಮಾನದ ಮೊಗಲ್ ಸಾಮ್ರಾಜ್ಯದ ರಾಜರು ಮುಸಲ್ಮಾನರಾಗಿದ್ದರಿಂದ 12ನೇ ಶತಮಾನದ ಮೊಂಗೋಲ್ ರಾಜರು ಕೂಡಾ ಮುಸಲ್ಮಾನರೇ ಆಗಿರಬಹುದೆಂದು ಮುಗ್ಧವಾಗಿ ತರ್ಕಿಸಿರಬೇಕು. ಅಥವಾ ಅವರು ಎಲ್ಲವನ್ನೂ ತಿಳಿದಿದ್ದೂ, ಮನುವಾದದ ಕರಾಳ ಕರ್ಮಕಾಂಡದ ಕುರಿತು ಸಮಾಜದಲ್ಲಿ ಯಾವುದೇ ಚರ್ಚೆ ನಡೆಯಬಾರದೆಂಬ ಉದ್ದೇಶದಿಂದ, ಸಾವಿರ ರೋಚಕ ಸುಳ್ಳುಗಳನ್ನು ತಾವೇ ಸೃಷ್ಟಿಸಿ ಅವುಗಳನ್ನು ಚರ್ಚಾ ವಿಷಯವಾಗಿಸುವ ಪ್ರಾಚೀನ ಮನುವಾದಿ ಪರಂಪರೆಯನ್ನು ಅನುಸರಿಸಿರಬೇಕು.

ಅದೇನಿದ್ದರೂ ಐತಿಹಾಸಿಕ ಸತ್ಯಗಳೆಲ್ಲಾ ರವಿಬೆಳಗೆರೆಯ ಲಗಾಮಿಲ್ಲದ ರೈಲಿನಡಿಯಲ್ಲಿ ಸಿಕ್ಕಿ ನುಚ್ಚು ನೂರಾಗಿ ಬಿಟ್ಟಿರುವುದು ಸತ್ಯದ ಕುರಿತು ಕಾಳಜಿ ಇರುವ ಎಲ್ಲ ಸತ್ಯಾರ್ಥಿಗಳ ಪಾಲಿಗೆ ಚಿಂತೆಯ ವಿಷಯವಾಗಿದೆ. ನಿಜವಾಗಿ ಚೆಂಗೀಸ್ ಖಾನ್‌ನಿಗೆ ಮುಸ್ಲಿಮರು ಅಥವಾ ಇಸ್ಲಾಮ್ ಧರ್ಮದೊಂದಿಗೆ ದೂರದ ನಂಟೂ ಇರಲಿಲ್ಲ. ನಂಟೇನಾದರೂ ಇದ್ದರೆ ಅದು ಕೇವಲ ದ್ವೇಷದ ನಂಟು ಮಾತ್ರ. ಇದು ಇತಿಹಾಸ ಬಲ್ಲ ಎಲ್ಲರಿಗೆ ಸ್ಪಷ್ಟವಾಗಿ ತಿಳಿದಿರುವ ಸಂಗತಿ. ಈ ಕುರಿತು ಇತಿಹಾಸಕಾರರಲ್ಲಿ ಯಾವುದೇ ಭಿನ್ನಮತವಿಲ್ಲ. ಮುಸ್ಲಿಮ್ ಇತಿಹಾಸಕಾರರು ಮಾತ್ರವಲ್ಲ, ಬೇರೆಲ್ಲ ಇತಿಹಾಸಕಾರರೂ ಅವನನ್ನು ಮುಸ್ಲಿಮ್ ಸಾಮ್ರಾಜ್ಯಗಳಿಗೆ ಅತ್ಯಂತ ಹೀನಾಯ ಸೋಲುಣಿಸಿದ, ತನ್ನ ಸಮಕಾಲೀನ ಮುಸ್ಲಿಮ್ ಸಮಾಜಕ್ಕೆ ಅತ್ಯಧಿಕ ಹಾನಿ ಮಾಡಿದ, ಇಸ್ಲಾಮ್ ವಿರೋಧಿ ಶತ್ರು ಎಂದೇ ಗುರುತಿಸುತ್ತಾರೆ. ಅವನು ಮತ್ತು ಅವನ ಮೊಂಗೋಲ್ (Mongol ) ವಂಶಸ್ಥರು ಪ್ರಾಚೀನ ಮಧ್ಯ ಏಶ್ಯದಲ್ಲಿ ವ್ಯಾಪಕವಾಗಿದ್ದ ‘ಶಮಾನಿ’ ಎಂಬ ಧರ್ಮದ ‘ಥೆಂಗ್ರಿ’ ಎಂಬ ಪಂಥಕ್ಕೆ ಸೇರಿದ್ದರು.

ಈ ಪಂಥದವರು ನೀಲಾಕಾಶವನ್ನೇ ದೇವರೆಂದು ಆರಾಧಿಸುತ್ತಿದ್ದರು. ತಮ್ಮ ಪೂರ್ವಜರನ್ನು ಮತ್ತು ಆತ್ಮಗಳನ್ನು ಪೂಜಿಸುತ್ತಿದ್ದರು. ಚೆಂಗೀಸ್ ಖಾನ್ ಮತ್ತು ಅವನ ಬುಡಕಟ್ಟಿನವರಿಗೆ ಇಸ್ಲಾಮ್ ಧರ್ಮದ ಕುರಿತು ಯಾವುದೇ ತಿಳುವಳಿಕೆ ಇರಲಿಲ್ಲ. ಕೆಲವು ಮುಸ್ಲಿಮ್ ದೊರೆಗಳ ಸಾಮ್ರಾಜ್ಯದಲ್ಲಿದ್ದ ಭಾರೀ ಸಂಪತ್ತು ಮಾತ್ರ ಅವನ ಆಸಕ್ತಿಯ ವಿಷಯವಾಗಿತ್ತು. ಆ ಸಂಪತ್ತನ್ನು ದೋಚುವುದು ಮತ್ತು ಅದಕ್ಕಾಗಿ ಜನರನ್ನು ಭಯಗ್ರಸ್ತರಾಗಿಸುವುದು ಮಾತ್ರ ಅವನ ಉದ್ದೇಶವಾಗಿತ್ತು. ಚೆಂಗೀಸ್ ಖಾನ್ ಮತ್ತು ಆತನ ಮೊಂಗೋಲ್ ವಂಶಸ್ಥರು ಏಶ್ಯದ ಬಹುತೇಕ ಭೂಭಾಗವನ್ನು ವಶಪಡಿಸಿಕೊಂಡಿದ್ದರು. ಅವನು ತಾನು ಹೋದಲ್ಲೆಲ್ಲ ಸರ್ವ ನಾಶ ಮೆರೆಯುತ್ತಿದ್ದ. 1227ರಲ್ಲಿ ಚೆಂಗೀಸ್ ಖಾನ್ ಮರಣಗೊಂಡ ಬಳಿಕ ಈ ವಿಧ್ವಂಸದ ಪರಂಪರೆಯನ್ನು ಅವನ ಪುತ್ರ ಉಗಿದಾಯ್ ಖಾನ್ ಮತ್ತು ಮೊಮ್ಮಗ ಹಲಾಗೂ ಖಾನ್ ಮುಂದುವರಿಸಿದ್ದರು.

ಮೊಂಗೋಲ್ ಆಡಳಿತಗಾರರು ಮುಸ್ಲಿಮ್ ಸಮಾಜದ ಜೊತೆ, ಅದರಲ್ಲೂ ಮುಸ್ಲಿಮ್ ವಿದ್ವಾಂಸರು, ವಿಜ್ಞಾನಿಗಳು, ಸಾಹಿತಿಗಳು ಮತ್ತು ಕಲಾವಿದರ ಜೊತೆ ಬೇರೆಯತೊಡಗಿದಂತೆ ಕ್ರಮೇಣ ಇಸ್ಲಾಮ್ ಧರ್ಮ ಮತ್ತು ಮುಸ್ಲಿಮ್ ಸಮಾಜದ ವಿಷಯದಲ್ಲಿ ಅವರ ಧೋರಣೆ ಸೌಮ್ಯವಾಗತೊಡಗಿತು. ಅನೇಕ ಮೊಂಗೋಲ್ ರಾಜಕುಮಾರರು ಮತ್ತು ಸ್ಥಳೀಯ ಆಡಳಿತಗಾರರು ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರು. ಚೆಂಗೀಸ್ ಖಾನ್ ನ ಮೊಮ್ಮಕ್ಕಳಲ್ಲೊಬ್ಬನಾಗಿದ್ದ ಬರ್ಕಿ ಖಾನ್ ಇಸ್ಲಾಮ್ ಸ್ವೀಕರಿಸಿದ ಬಳಿಕ, ಆತನ ಸಮುದಾಯದಲ್ಲಿ ಸಾಮೂಹಿಕವಾಗಿ ಇಸ್ಲಾಮ್ ಧರ್ಮ ಸ್ವೀಕರಿಸುವ ಒಲವು ಆರಂಭವಾಯಿತು.

ಇದರೊಂದಿಗೆ, ಪತನಶೀಲವಾಗಿದ್ದ ಮುಸ್ಲಿಮ್ ಇತಿಹಾಸವು ಪುನಶ್ಚೇತನ ಪಡೆಯಿತು. ನಿಜವಾಗಿ ಚೆಂಗೀಸ್ ಖಾನ್‌ನ ಸೇನೆಯಿಂದ ಆಕ್ರಮಣಕ್ಕೆ ತುತ್ತಾದವರು ಹಲವು ಮುಸ್ಲಿಮ್ ಸಾಮ್ರಾಜ್ಯಗಳ ಪ್ರಜೆಗಳು ಮತ್ತು ಸೈನಿಕರಾಗಿದ್ದರು. ಲಕ್ಷಾಂತರ ಮಂದಿ ಮುಸ್ಲಿಮರು ಚೆಂಗೀಸ್ ಖಾನ್ ಸೈನಿಕ ಆಕ್ರಮಣಗಳಲ್ಲಿ ಹತರಾಗಿದ್ದರು. ಅವನ ಆಡಳಿತಾವಧಿಯನ್ನು ಮುಸ್ಲಿಮರ ಇತಿಹಾಸದ ಅತ್ಯಂತ ಅಪಮಾನಾತ್ಮಕ ಅವಧಿಯ ರೂಪದಲ್ಲಿ ಸ್ಮರಿಸಲಾಗುತ್ತದೆ. ಏಕೆಂದರೆ ಮುಸ್ಲಿಮರ ನಾಡುಗಳಿಗೆ ಬೇರಾವುದೇ ಶತ್ರು ಪಡೆಗಳು ಮಾಡಿದ್ದಕ್ಕಿಂತ ಹೆಚ್ಚಿನ ಹಾನಿಯನ್ನು ಚೆಂಗೀಸ್ ಖಾನನ ಪಡೆಗಳು ಮಾಡಿದ್ದವು. ಚೆಂಗೀಸ್ ಖಾನ್ ಮುಸ್ಲಿಮರು ಮತ್ತು ಯೆಹೂದಿ ಮತಸ್ಥರನ್ನು ಎಷ್ಟೊಂದು ತೀವ್ರವಾಗಿ ದ್ವೇಷಿಸುತ್ತಿದ್ದನೆಂದರೆ ಅವನ ಸಾಮ್ರಾಜ್ಯದಲ್ಲಿ ಮುಸ್ಲಿಮರ ಹಾಗೂ ಯೆಹೂದಿ ಮತಸ್ಥರ ಮೇಲೆ ಹಲವು ಧಾರ್ಮಿಕ ನಿರ್ಬಂಧಗಳನ್ನು ಹೇರಲಾಗಿತ್ತು.

ಕೆಲವು ಪ್ರಾಂತಗಳಲ್ಲಿ ಮುಸ್ಲಿಮ್ ಗಂಡು ಮಕ್ಕಳಿಗೆ ಮುಂಜಿ ಮಾಡಿಸುವ ಸಂಪ್ರದಾಯದ ಮೇಲೆ ನಿಷೇಧ ಹೇರಲಾಗಿತ್ತು. ಮಾಂಸಾಹಾರಿ ಮುಸ್ಲಿಮರು ತಾವು ತಮ್ಮದೇ ಧಾರ್ಮಿಕ ವಿಧಾನ ಪ್ರಕಾರ ವಧಿಸಿದ ಪ್ರಾಣಿಗಳನ್ನು ಮಾತ್ರ ತಿನ್ನುತ್ತೇವೆಂದಾಗ ಅದನ್ನು ನಿಷೇಧಿಸಿ, ಥೆಂಗ್ರಿ ಮತಸ್ಥರು ವಧಿಸಿದ ಪ್ರಾಣಿಗಳನ್ನು ಮಾತ್ರ ತಿನ್ನಬೇಕು ಎಂಬ ನಿಯಮವನ್ನು ಜಾರಿಗೊಳಿಸಲಾಯಿತು. ಯೆಹೂದ್ಯರ ಪಾಲಿಗೆ ಅವರ ಸಾಂಪ್ರದಾಯಿಕ ಕೋಶರ್ ಆಹಾರವನ್ನು ನಿಷೇಧಿಸಲಾಯಿತು. ಚೆಂಗೀಸ್ ಖಾನ್ ಸಾಯುವಾಗಲೂ ಪ್ರಸ್ತುತ ಥೆಂಗ್ರಿ ಮತದ ಅನುಯಾಯಿಯಾಗಿಯೇ ಸತ್ತಿದ್ದ. ಅವನ ಮಕ್ಕಳು ಕೂಡ ಅದೇ ಮತದ ಅನುಯಾಯಿಗಳಾಗಿದ್ದರು.

ಚೆಂಗೀಸ್ ಖಾನ್ ಸತ್ತು ಹಲವು ದಶಕಗಳು ಕಳೆದ ಬಳಿಕ ಅವನ ಮೊಮ್ಮಗ ಹಲಾಗೂ ಖಾನ್ ಕೂಡಾ ಇಸ್ಲಾಮ್ ಧರ್ಮ ಮತ್ತು ಮುಸ್ಲಿಮ್ ಸಮಾಜದ ಪರಮ ಶತ್ರುವಾಗಿದ್ದ. ಮೂರನೇ ತಲೆಮಾರಿಗೆ ಸೇರಿದ, ಅವನ ಮೊಮ್ಮಕ್ಕಳಲ್ಲಿ ಮಾತ್ರ ಕೆಲವರು ಇಸ್ಲಾಮ್ ಧರ್ಮದ ಪರ ಒಲವು ತೋರಿದ್ದರು. ಮೊಂಗೋಲ್ ವಂಶಸ್ಥರ ಪೈಕಿ ಪ್ರಥಮವಾಗಿ ಇಸ್ಲಾಮ್ ಧರ್ಮ ಸ್ವೀಕರಿಸಿದ್ದು ಚೆಂಗೀಸ್ ಖಾನ್‌ನ ಮೊಮ್ಮಗ ಬರ್ಕಿ ಖಾನ್ (1209 ರಿಂದ 1266). ಮುಸಲ್ಮಾನರ ವಿರುದ್ಧ ಜನರಲ್ಲಿ ಪ್ರತಿಕೂಲ ಅಭಿಪ್ರಾಯ ಮೂಡಿಸಬೇಕೆಂಬ ತಮ್ಮ ಹುಚ್ಚು ಆವೇಶದಲ್ಲಿ ರವಿ ಬೆಳಗೆರೆ ಈ ಎಲ್ಲ ಐತಿಹಾಸಿಕ ಸತ್ಯಗಳ ಪಾಲಿಗೆ ಕುರುಡಾಗಿ ಬಿಟ್ಟರು ಮತ್ತು ತಾವೇ ಕಟ್ಟಿದ ಕತೆಯನ್ನು ಇತಿಹಾಸವೆಂದು ಕರೆಯುವ ಅಪರಾಧವೆಸಗಿದರು. ಯಾವುದೋ ಕಾಲದಲ್ಲಿ ಬೆಳಗೆರೆಯವರು ಪತ್ರಕರ್ತರಾಗಿದ್ದರೆಂಬ ಕಾರಣಕ್ಕಾಗಿ ಅವರು ಗೀಚಿದ್ದನ್ನೆಲ್ಲಾ ನಂಬಿದ ಬಡಪಾಯಿ ಓದುಗರ ಗತಿ ಏನು?

ಇದು, ರವಿ ಬೆಳಗೆರೆಯ ಒಂದು ಪುಸ್ತಕದಲ್ಲಿರುವ ನೂರಾರು ಘೋರ ಸುಳ್ಳುಗಳ ಪೈಕಿ ಕೇವಲ ಒಂದು ಸುಳ್ಳಿನ ಒಳ ರೂಪ. ಉಳಿದ ಸುಳ್ಳುಗಳನ್ನು ಅಳೆದು ಬೀದಿಗೆಳೆಯುವುದು ಓದುಗರಿಗೆ ಬಿಟ್ಟಿದೆ.

Writer - ಯೂಸುಫ್ ಶುಕೂರ್ ಬೋಳಾರ

contributor

Editor - ಯೂಸುಫ್ ಶುಕೂರ್ ಬೋಳಾರ

contributor

Similar News