ಭಾರತ ಅತ್ಯಂತ ವೇಗದ ಆರ್ಥಿಕ ಅಭಿವೃದ್ಧಿ ಹೊಂದುತ್ತಿರುವ ದೇಶ : ಸಚಿವೆ ನಿರ್ಮಲಾ ಸೀತಾರಾಮನ್

Update: 2021-12-28 16:57 GMT

ಮಣಿಪಾಲ, ಡಿ.28: ವಿಶ್ವದಲ್ಲಿ ಸದ್ಯ ಭಾರತ ಅತ್ಯಂತ ವೇಗವಾಗಿ ಆರ್ಥಿಕ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ ಎಂಬುದನ್ನು ಐಎಂಎಫ್‌ನಂಥ ಜಾಗತೀಯ ಏಜೆನ್ಸಿಗಳು ಗುರುತಿಸಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ವತಿಯಿಂದ ಇಂದು ನಡೆದ ಎಂ.ವಿ.ಕಾಮತ್ ಶತಮಾನೋತ್ಸವ ಸಂಸ್ಮರಣ ಉಪನ್ಯಾಸದಲ್ಲಿ ‘ಭಾರತ ಮತ್ತು ಸಾಂಕ್ರಾಮಿಕೋತ್ತರ ಆರ್ಥಿಕ ಮರು ಹೊಂದಾಣಿಕೆ’ ವಿಷಯದ ಮೇಲೆ ವೆಬಿನಾರ್ ಮೂಲಕ ಹೊಸದಿಲ್ಲಿಯಿಂದ ಮಾತನಾಡುತಿದ್ದರು.

ಭಾರತದಲ್ಲಿ ಈಗ ಸುಸ್ಥಿರ ಬೆಳವಣಿಗೆಯ ಗತಿಯನ್ನು ಕಾಯ್ದುಕೊಳ್ಳಲಾಗಿದೆ. ಉಳಿತಾಯ ಹಾಗೂ ಹೂಡಿಕೆಯ ಸ್ವಭಾವದಲ್ಲಿ ಬದಲಾವಣೆಯಾಗುತ್ತಿದೆ. ಸಾಧನೆ ಮತ್ತು ಪ್ರಗತಿಯ ಆತ್ಮವಿಶ್ವಾಸದದಿಂದ ಕೂಡಿದ ಹೊಸ ಭಾರತ ಪ್ರವರ್ಧಮಾನಕ್ಕೆ ಬರುತ್ತಿದೆ ಎಂದು ಸಚಿವೆ ಅಭಿಪ್ರಾಯಪಟ್ಟರು.

ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕೃತಿ ಸಹ್ಯ ಇಂಧನ ಮೂಲದ ಅಭಿವೃದ್ಧಿಗೆ ಯಶಸ್ವಿ ಚಾಲನೆ ನೀಡಿದ್ದಾರೆ. ಕೊರೋನ ಲಾಕ್‌ಡೌನ್‌ನ್ನು ದೇಶದಲ್ಲಿ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಜಾರಿಗೊಳಿಸಲಾಗಿದೆ. ದೇಶದ 80 ಕೋಟಿ ಜನತೆಗೆ ಆಹಾರಧಾನ್ಯಗಳನ್ನು ವಿತರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ನುಡಿದರು.

ದೇಶದ ಶೇ.95ರಷ್ಟು ಜನತೆಗೆ ಕೋವಿಡ್‌ನ ಮೊದಲ ಡೋಸ್ ಲಸಿಕೆಯನ್ನು ಕೇವಲ 12 ತಿಂಗಳೊಳಗೆ ನೀಡಲಾಗಿದೆ. ಎರಡನೇ ಡೋಸ್ ಲಸಿಕೆಯನ್ನು ಈಗಾಗಲೇ ಶೇ.60ರಷ್ಟು ಜನರಿಗೆ ನೀಡಲಾಗಿದೆ. ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಮುನ್ನೆಚ್ಚರಿಕೆ ಡೋಸ್ ಹಾಗೂ 15ರಿಂದ 18 ವರ್ಷದೊಳಗಿನವರಿಗೆ ಲಸಿಕೆಯನ್ನು ಶೀಘ್ರದಲ್ಲೇ ನೀಡಲಾಗುವುದು ಎಂದರು.

ಕೊರೋನದಿಂದ ದೇಶದ ಆರ್ಥಿಕತೆಗೆ ತೊಂದರೆಯಾಗದಂತೆ ಮೈಕ್ರೋ ಕಂಟೈನ್‌ಮೆಂಟ್ ಝೋನ್‌ಗಳನ್ನು ಮಾಡಲಾಗುತ್ತಿದೆ. ದೇಶದಲ್ಲೀಗ ಐತಿಹಾಸಿಕ ರೀತಿಯಲ್ಲಿ ಆರ್ಥಿಕತೆಯ ಮರು ಹೊಂದಾಣಿಕೆ ನಡೆಯುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News