ಉತ್ತರ ಪ್ರದೇಶ: ಶಾಲಾ ಮಕ್ಕಳಿಗೆ 'ಹಿಂದು ರಾಷ್ಟ್ರಕ್ಕೆ ಕೊಲೆಯಾಗಲು, ಕೊಲ್ಲಲು ಸಿದ್ಧ' ಪ್ರತಿಜ್ಞಾವಿಧಿ ಬೋಧನೆ: ವಿವಾದ

Update: 2021-12-29 12:55 GMT

ಹೊಸದಿಲ್ಲಿ : "ಭಾರತವನ್ನು ಹಿಂದು ರಾಷ್ಟ್ರವಾಗಿ ಪರಿವರ್ತಿಸುವ" ಪ್ರತಿಜ್ಞೆ ಕೈಗೊಳ್ಳುವ ಹಲವಾರು  ಕಾರ್ಯಕ್ರಮಗಳು ದೇಶದ ವಿವಿಧೆಡೆ ನಡೆದಿವೆ ಎನ್ನಲಾಗಿದ್ದು ಸುದರ್ಶನ್ ನ್ಯೂಸ್ ಮತ್ತು ಸಂಸ್ಥೆಯ ಮುಖ್ಯ ಸಂಪಾದಕ ಸುರೇಶ್ ಚವ್ಹಂಕೆ ಈ ಕುರಿತು ತಮ್ಮ ಟ್ವಿಟ್ಟರ್ ಹ್ಯಾಂಡಲ್‍ಗಳಲ್ಲಿ ವೀಡಿಯೋಗಳನ್ನು ಶೇರ್ ಮಾಡಿದ್ದಾರೆ.

ಇಂದು  ಸುರೇಶ್ ಚವ್ಹಂಕೆ ಅವರು ಶೇರ್ ಮಾಡಿರುವ ಒಂದು ವೀಡಿಯೋದಲ್ಲಿ ಉತ್ತರ ಪ್ರದೇಶದ ಸೋನಭದ್ರ ಎಂಬಲ್ಲಿನ ಶಾಲೆಯ ವಿದ್ಯಾರ್ಥಿಗಳಿಗೆ "ಭಾರತವನ್ನು ಹಿಂದು ರಾಷ್ಟ್ರವನ್ನಾಗಿಸಲು  ಹೋರಾಡಲು, ಮಡಿಯಲು ಹಾಗೂ ಅಗತ್ಯ ಬಿದ್ದರೆ ಕೊಲ್ಲಲು" ಪ್ರತಿಜ್ಞೆ ಬೋಧಿಸುತ್ತಿರುವುದು ಕಾಣಿಸುತ್ತದೆ.

ಸೋನಭದ್ರಾ ಎಂಬಲ್ಲಿನ ನೆಹರೂ ಪಾರ್ಕಿನಲ್ಲಿ ನಡೆದ ಈ ಕಾರ್ಯಕ್ರಮದ ವೀಡಿಯೋವನ್ನು ಸುದರ್ಶನ್ ಟಿವಿ ವರದಿಗಾರ ರಾಜೇಶ್ ಸಿಂಗ್ ಚಿತ್ರೀಕರಿಸಿದ್ದರು. ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಮತ್ತು ಜೈ ಹಿಂದ್ ಘೋಷಣೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಿತ್ತು. ಶಾಲಾ ಸಮವಸ್ತ್ರದಲ್ಲಿದ್ದ ಮಕ್ಕಳು ಶಾಲಾವಧಿಯ ನಂತರ ಈ ಪಾರ್ಕಿಗೆ ಆಗಮಿಸಿದ್ದರು. ತಮ್ಮ ಹೆತ್ತವರೊಂದಿಗೆ ಆಗಮಿಸಿದ್ದ ಕೆಲ ಮಕ್ಕಳೂ ಈ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ವೀಡಿಯೋ ಕುರಿತು ತನಿಖೆ ನಡೆಯುತ್ತಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಇಂತಹುದೇ ಪ್ರತಿಜ್ಞಾ ವಿಧಿ ಬೋಧಿಸಿದ  ಉತ್ತರ ಪ್ರದೇಶದ ರುಪೈದಿಹಾ ಹಾಗೂ ನಾಗ್ಪುರ್ ಎಂಬಲ್ಲಿನ ಕಾರ್ಯಕ್ರಮಗಳ ವೀಡಿಯೋಗಳನ್ನು ಸುದರ್ಶನ್ ನ್ಯೂಸ್ ಶೇರ್ ಮಾಡಿದೆ. ರುಪೈದಿಹಾ ಎಂಬಲ್ಲಿ ಸುಮಾರು 12 ಜನರ ಗುಂಪು ಪ್ರತಿಜ್ಞಾವಿಧಿ ಸ್ವೀಕರಿಸಿದ್ದರೆ ನಾಗ್ಪುರದಲ್ಲಿ ಅಪರಿಚಿತ ಮಹಿಳೆಯೊಬ್ಬರು ಪ್ರತಿಜ್ಞಾ ವಿಧಿ ಬೋಧಿಸಿರುವುದು ಕಾಣಿಸುತ್ತದೆ. ಕೊನೆಗೆ ಮೇಲೆ ತಿಳಿಸಿದ ಘೋಷಣೆಗಳ ಸಹಿತ ʼಛತ್ರಪತಿ ಶಿವಾಜಿ ಮಹಾರಾಜ್ ಕಿ ಜೈʼ ಘೋಷಣೆಗಳೂ ಮೊಳಗಿದ್ದವು.

ಡಿಸೆಂಬರ್ 16ರಂದು ಹಿಂದು ಯುವ ವಾಹಿನಿ ಸಂಘಟನೆಯು ದಿಲ್ಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಸುರೇಶ್ ಸ್ವತಃ ಇಂತಹ ಪ್ರತಿಜ್ಞಾ ವಿಧಿ ಬೋಧಿಸಿದ್ದರು. ಈ ಕುರಿತಾದ ವೀಡಿಯೋಗಳೂ ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದೆಯೇ ಕಾಣಿಸಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News