ಕಳ್ಳತನ ಆರೋಪ ಹೊರಿಸಿ ದಲಿತ ಬಾಲಕಿಯ ಮೇಲೆ ದೌರ್ಜನ್ಯ: ಆಘಾತಕಾರಿ ವೀಡಿಯೋ ವೈರಲ್

Update: 2021-12-29 13:00 GMT

ಲಕ್ನೋ: ಉತ್ತರ ಪ್ರದೇಶದ ಅಮೇಠಿಯಲ್ಲಿ ಅಪ್ರಾಪ್ತ ದಲಿತ ಬಾಲಕಿಗೆ ಮನಬಂದಂತೆ ಕೆಲವರು ಥಳಿಸುತ್ತಿರುವ ಆಘಾತಕಾರಿ ಘಟನೆಯ ವೀಡಿಯೋ ವೈರಲ್ ಆಗಿದೆ. ಈ  ಕುರಿತು ಪ್ರಕರಣ ದಾಖಲಿಸಿರುವ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ವೀಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಹದಿಹರೆಯದ ಬಾಲಕಿಯನ್ನು ನೆಲಕ್ಕೆ ಬೀಳಿಸುವುದು ಹಾಗೂ ಮೂರನೇ  ವ್ಯಕ್ತಿಯೊಬ್ಬ ಆಕೆಯ ಪಾದದ ಅಡಿಗೆ ಕೋಲಿನಿಂದ ಹೊಡೆಯುತ್ತಿರುವುದು ಕಾಣಿಸುತ್ತದೆ. ಬಾಲಕಿಯ ಮೇಲೆ ಕಳ್ಳತನ ಆರೋಪ ಹೊರಿಸಲಾಗಿದೆಯೆನ್ನಲಾಗಿದೆ. ವೀಡಿಯೋದಲ್ಲಿ ಕಾಣಿಸುವ ಮೂವರು ಮಹಿಳೆಯರು ಆಕೆಯನ್ನು ಪ್ರಶ್ನಿಸುತ್ತಿರುವುದೂ ಕೇಳಿಸುತ್ತದೆ. ಹುಡುಗಿ ನೋವಿನಿಂದ ಚೀರಾಡುತ್ತಿದ್ದರೂ ಹೊಡೆಯುವುದನ್ನು ನಿಲ್ಲಿಸಲಾಗಿಲ್ಲ. ಒಂದು ಹಂತದಲ್ಲಿ ಬಾಲಕಿಯ ಕೂದಲನ್ನು ಒಬ್ಬ ವ್ಯಕ್ತಿ ಹಿಡಿದೆಳೆಯುವುದೂ ಕಾಣಿಸುತ್ತದೆ.

ಈ ಕುರಿತು ಟ್ವೀಟ್ ಮಾಡಿರುವ ಅಮೇಠಿ ಪೊಲೀಸರು, ಪೋಕ್ಸೋ ಮತ್ತು ಪರಿಶಿಷ್ಟ ಜಾತಿ ಪಂಗಡ ದೌರ್ಜನ್ಯ ತಡೆ ಪ್ರಕರಣ ದಾಖಲಿಸಲಾಗಿದೆ ಹಾಗೂ ನಮನ್ ಸೋನಿ ಎಂಬಾತನನ್ನು ಬಂಧಿಸಲಾಗಿದೆ. ಇತರ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂಬ ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರ ಈ ಘಟನೆಯನ್ನು ಖಂಡಿಸಿದ್ದಾರಲ್ಲದೆ ರಾಜ್ಯದಲ್ಲಿ ಪ್ರತಿ ದಿನ ಜಾತಿ ಆಧರಿತ 34 ಅಪರಾಧಗಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯದ 135 ಪ್ರಕರಣಗಳು ವರದಿಯಾಗುತ್ತಿದ್ದರೂ ಯೋಗಿ ಆದಿತ್ಯನಾಥ್ ಸರಕಾರ ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದ್ದಾರೆ.

 ಆರೋಪಿಗಳೆಲ್ಲರನ್ನು 24 ಗಂಟೆಗಳೊಳಗೆ ಬಂಧಿಸದೇ ಇದ್ದರೆ ಪ್ರತಿಭಟನೆಯ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News