ಮುಸ್ಲಿಮರ ವಿರುದ್ಧ ಆಯುಧಗಳೊಂದಿಗಿನ ಹೋರಾಟಕ್ಕೆ ಅಖಾಡಗಳಿಂದ ಕೋರ್ ಸಮಿತಿ ರಚನೆ

Update: 2021-12-29 15:51 GMT
Photo: Facebook

ಹೊಸದಿಲ್ಲಿ,ಡಿ.29: ಹರಿದ್ವಾರದಲ್ಲಿ ಇತ್ತೀಚಿಗೆ ನಡೆದ ಧರ್ಮಸಂಸದ್ನಲ್ಲಿ ದ್ವೇಷ ಭಾಷಣಗಳನ್ನು ಮಾಡಿದ್ದ ಹಲವಾರು ಹಿಂದುತ್ವ ನಾಯಕರ ಪೈಕಿ ಮೂವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದರೂ ಅದರಿಂದ ವಿಚಲಿತಗೊಳ್ಳದ ಹಲವಾರು ಅಖಾಡಾಗಳ ಸಂತರು ಮಂಗಳವಾರ ಸಭೆಯನ್ನು ಸೇರಿ 21 ನಾಯಕರ ಕೋರ್ ಸಮಿತಿಯೊಂದನ್ನು ರಚಿಸಿದ್ದಾರೆ. ಇಸ್ಲಾಮ್ ಅನ್ನು ‘ಸಶಸ್ತ್ರ ಜನರ ಗುಂಪು’ಎಂದು ಬಣ್ಣಿಸಿರುವ ಈ ಸಂತರು ಅದರ ವಿರುದ್ಧ ಹೋರಾಟವನ್ನು ಮುಂದುವರಿಸಲು ನಿರ್ಣಯಿಸಿದ್ದಾರೆ. ಇಷ್ಟೇ ಅಲ್ಲ, ಕುರ್‌ಆನ್ ಮತ್ತು ಹರಿದ್ವಾರದ ಹಲವಾರು ಮೌಲಾನಾಗಳು ಮತ್ತು ಇಮಾಮ್ ಗಳ ವಿರುದ್ಧ ಕೋತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ.

 ‘ಕುರ್‌ಆನ್ ಕಾಫಿರ್ ಗಳನ್ನು ಕೊಲ್ಲುವಂತೆ ನಿಮ್ಮನ್ನು (ಮುಸ್ಲಿಮರು) ಪ್ರಚೋದಿಸುತ್ತದೆ. ಈ ಗ್ರಂಥವು ಪ್ರಚೋದನಾತ್ಮಕ ಅಧ್ಯಾಯಗಳನ್ನು ಒಳಗೊಂಡಿದೆ. ಅದನ್ನು ನಿಷೇಧಿಸಬೇಕು’ಎಂದು ನಿರಂಜನ ಅಖಾಡಾದ ದರ್ಶನ ಭಾರತಿ ಅವರು ‘ದಿ ಇಂಡಿಯನ್ ಕೇಬಲ್’ಗೆ ಹೇಳಿರುವುದನ್ನು ಉಲ್ಲೇಖಿಸಿ ಸುದ್ದಿ ಜಾಲತಾಣ ‘ದಿ ವೈರ್’ ವರದಿಯನ್ನು ಪ್ರಕಟಿಸಿದೆ.

ಭಾರತವನ್ನು ‘ಹಿಂದು ರಾಷ್ಟ್ರ’ವಾಗಿ ಪರಿವರ್ತಿಸಲು ತಮ್ಮ ಅಭಿಯಾನವನ್ನು ತೀವ್ರಗೊಳಿಸಲೂ ನಿರ್ಧರಿಸಿರುವ ಹಿಂದುತ್ವ ನಾಯಕರು, ಹರಿದ್ವಾರ ಸಮಾವೇಶದಲ್ಲಿಯ ತಮ್ಮ ದ್ವೇಷ ಭಾಷಣಗಳನ್ನು ಸಮರ್ಥಿಸಿಕೊಂಡಿದ್ದಾರೆ.

‘ಅಲಿಗಡ, ಕುರುಕ್ಷೇತ್ರ ಮತ್ತು ಶಿಮ್ಲಾಗಳಲ್ಲಿ ಇನ್ನೂ ಮೂರು ಧರ್ಮ ಸಂಸದ್ ಗಳನ್ನು ನಾವು ನಡೆಸಲಿದ್ದೇವೆ. ಇದು ನಮ್ಮ ವಾಕ್ಸ್ವಾತಂತ್ರದ ಕುರಿತಾಗಿದೆ ಎಂದು ನಾವು ನಿರ್ಣಯಿಸಿದ್ದೇವೆ ಮತ್ತು ಭಾಷಣ ಮಾಡುವುದನ್ನು ಮುಂದುವರಿಸುತ್ತೇವೆ ’ಎಂದು ಸ್ವಾಮಿ ಆನಂದ ಸ್ವರೂಪ್ ಅವರು ತಿಳಿಸಿದರು.

ಕೋರ್ ಸಮಿತಿಯ ಸದಸ್ಯರಲ್ಲಿ ಯತಿ ನರಸಿಂಹಾನಂದ ಸರಸ್ವತಿ, ಸ್ವಾಮಿ ಪ್ರಬೋಧಾನಂದ, ಹಿಂದು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಅನ್ನಪೂರ್ಣಾ ಭಾರತಿ ಅಲಿಯಾಸ್ ಪೂಜಾ ಶಕುನ್ ಪಾಂಡೆ, ಪಂಡಿತ ಆಧಿರ್ ಕೌಶಿಕ್, ಸಿಂಧು ಮಾರಾಜ್ ಮತ್ತು ಸ್ವಾಮಿ ದರ್ಶನ ಭಾರತಿ ಸೇರಿದ್ದು ಇವರೆಲ್ಲರೂ ಮುಸ್ಲಿಮರ ನಿರ್ನಾಮಕ್ಕೆ ಕರೆ ನೀಡಿದ್ದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಹಾತ್ಮಾ ಗಾಂಧಿಯ ಕುರಿತು ಮೌನ ತಳೆಯಲು ಈ ಹಿಂದುತ್ವ ನಾಯಕರು ಸರ್ವಾನುಮತದ ನಿರ್ಧಾರವನ್ನು ಕೈಗೊಂಡಿದ್ದು, ಇದೊಂದು ಚಾಣಾಕ್ಷ ನಿರ್ಧಾರವಾಗಿರುವಂತೆ ಕಂಡು ಬರುತ್ತಿದೆ.

ಈ ನಾಯಕರು ಕಳೆದ ಕೆಲವು ವರ್ಷಗಳಲ್ಲಿ ಸಶಸ್ತ್ರ ಜಾಗೃತ ದಳಗಳನ್ನು ಸ್ಥಾಪಿಸಿ ಬೆಳೆಸಿರುವುದನ್ನು ದಿ ಇಂಡಿಯಾ ಕೇಬಲ್ ಸೋಮವಾರ ವರದಿ ಮಾಡಿತ್ತು. ಶಸ್ತ್ರೀಕರಣವನ್ನು ಮುಂದುವರಿಸುವ ತಮ್ಮ ನಿರ್ಣಯವನ್ನು ಅವರು ಮಂಗಳವಾರದ ಸಭೆಯಲ್ಲಿ ಪುನರುಚ್ಚರಿಸಿದ್ದಾರೆ.

‘ಭಾರತದಲ್ಲಿ ಹಿಂದು ಧರ್ಮದ ಕುರಿತು ಮಾತನಾಡುವುದು ತಪ್ಪೇ? 1,400 ವರ್ಷಗಳ ಹಿಂದೆ ಅಖಾಡಾಗಳನ್ನು ಸ್ಥಾಪಿಸಿದ್ದ ಆದಿ ಶಂಕರಾಚಾರ್ಯರು ಬೌದ್ಧರಿಂದ ನಮ್ಮ ಧರ್ಮವನ್ನು ರಕ್ಷಿಸಲು ಅವುಗಳನ್ನು ವಿವಿಧ ಶಸ್ತ್ರಗಳೊಂದಿಗೆ ಸಜ್ಜುಗೊಳಿಸಿದ್ದರು. ಗುರು ಗೋವಿಂದ ಸಿಂಗ್ ತನ್ನದೇ ಆದ ಸೈನ್ಯವನ್ನು ರಚಿಸಿದ್ದಂತೆ ಅಖಾಡಾಗಳು ಧರ್ಮದ ಸೈನ್ಯವಿದ್ದಂತೆ. ಆಗ ಯಾವುದೇ ವಿವಾದವಿರಲಿಲ್ಲ. ಈಗ ಮಾತ್ರ ಸಮಸ್ಯೆ ಏಕೆ? ಇಸ್ಲಾಂ ಒಂದು ಸಶಸ್ತ್ರ ಗ್ಯಾಂಗ್ ಆಗಿದೆ ಮತ್ತು ನೀವು ಶಸ್ತ್ರಗಳೊಂದಿಗೆ ಮಾತ್ರ ಅವರೊಂದಿಗೆ ಹೋರಾಡಲು ಸಾಧ್ಯ’ ಎಂದು ದರ್ಶನ ಭಾರತಿ ಹೇಳಿದರು.

ಧರ್ಮ ಸಂಸದ್ ಗೆ ಸ್ಪಂದನಗಳ ಬಗ್ಗೆ ತೃಪ್ತಿಯನ್ನು ವ್ಯಕ್ತಪಡಿಸಿದ ಅವರು, ಹರಿದ್ವಾರವು ವಿಶ್ವಕ್ಕೆ ಸೂಕ್ತ ಪಾಠವೊಂದನ್ನು ನೀಡಿದೆ. ಭಾರತವನ್ನು ಹಿಂದು ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಧರ್ಮ ಸಂಸದ್ ಒಂದು ಹೆಜ್ಜೆಯಾಗಿದೆ ಎಂದರು.

ಹಿಂದುತ್ವವಾದಿ ನಾಯಕರು ತಮ್ಮ ಯೋಜನೆಗಳನ್ನು ಮುಂದುವರಿಸಲು ಸಜ್ಜಾಗಿದ್ದು,ಅವರ ಸೈದ್ಧಾಂತಿಕ ಪೋಷಕನಾಗಿರುವ ಬಿಜೆಪಿ ಅವರೊಂದಿಗೆ ಹೇಗೆ ವ್ಯವಹರಿಸಲಿದೆ?

ಈ ಸಶಸ್ತ್ರ ಹೋರಾಟವನ್ನು ಬಹಿರಂಗವಾಗಿ ಬೆಂಬಲಿಸಲು ಬಿಜೆಪಿಗೆ ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆಗೆ ದರ್ಶನ ಭಾರತಿ,ಬಿಜೆಪಿ ಮತ್ತು ಆರೆಸ್ಸೆಸ್ ಹಿಂದುಗಳನ್ನು ಗುತ್ತಿಗೆಗೆ ಪಡೆದಿದ್ದಾರೆಯೇ? ಬಿಜೆಪಿ,ವಿಹಿಂಪ ಏನು ಹೇಳುತ್ತವೆಯೋ ಅದೇ ಆಗಬೇಕೆಂದಿಲ್ಲ. ಜನರು ಎಚ್ಚೆತ್ತುಕೊಂಡರೆ ಏನು ಬೇಕಾದರೂ ಸಾಧ್ಯವಿದೆ ಎಂದು ಉತ್ತರಿಸಿದರು.

ಹಿಂದುತ್ವ ನಾಯಕರು ತಮ್ಮ ಉದ್ದೇಶವನ್ನು ಘೋಷಿಸಿದ್ದಾರೆ. ಅವರ ಪೈಕಿ ಕೇವಲ ಮೂವರ ವಿರುದ್ಧ ಕೆಲವು ಸೌಮ್ಯ ಸ್ವರೂಪದ ಪೊಲೀಸ್ ಪ್ರಕರಣಗಳು ದಾಖಲಾಗಿರುವುದು ಅವರಿಗೆ ಇನ್ನಷ್ಟು ಧೈರ್ಯವನ್ನು ನೀಡಿದೆ. ಬಿಜೆಪಿಯ ನಾಯಕರು ಬ್ರಿಗೇಡ್ ಅನ್ನು ಮೌನವಾಗಿ ಬೆಂಬಲಿಸುತ್ತಿದ್ದಾರೆ. ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳಲ್ಲಿ ಚುನಾವಣೆಗಳು ಸನ್ನಿಹಿತವಾಗಿದ್ದು, ಚುನಾವಣೆಗಳ ಮೇಲೆ ಇದರ ಪರಿಣಾಮವನ್ನು ಅದು ಕೀಳಂದಾಜಿಸುವಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News