ಭಾರತದಲ್ಲಿ ಶೀಘ್ರವೇ ಕೊರೋನ ಪ್ರಕರಣ ಉಲ್ಬಣ ಕ್ಯಾಂಬ್ರಿಡ್ಜ್ ವಿವಿ ಪ್ರೊಫೆಸರ್ ಎಚ್ಚರಿಕೆ
ಲಂಡನ್, ಡಿ.29: ಭಾರತದಲ್ಲಿ ಕೆಲವೇ ದಿನಗಳಲ್ಲಿ ಒಮೈಕ್ರಾನ್ ಸೋಂಕಿನ ಅಲೆಯಿಂದಾಗಿ ಕೊರೋನ ಸೋಂಕು ಉಲ್ಬಣಿಸಬಹುದು ಎಂದು ಕ್ಯಾಂಬ್ರಿಜ್ ವಿವಿಯ ಪ್ರೊಫೆಸರ್ ಪಾಲ್ ಕಟೂಮನ್ ಎಚ್ಚರಿಸಿದ್ದಾರೆ.
ಭಾರತದಲ್ಲಿ ದೈನಂದಿನ ಸೋಂಕು ಪ್ರಕರಣ ತೀವ್ರಗತಿಯಲ್ಲಿ ಹೆಚ್ಚುವ ಸಾಧ್ಯತೆಯಿದೆ ಮತ್ತು ತೀವ್ರ ಬೆಳವಣಿಗೆಯ ಹಂತವು ತುಲನಾತ್ಮಕವಾಗಿ ಚಿಕ್ಕದಿರಬಹುದು ಎಂದು ಕ್ಯಾಂಬ್ರಿಡ್ಜ್ ವಿವಿಯ ಜಡ್ಜ್ ಬ್ಯುಸಿನೆಸ್ ಸ್ಕೂಲ್‌ನ ಪ್ರೊಫೆಸರ್ ಪಾಲ್ ಕಟೂಮನ್ ಹೇಳಿದ್ದಾರೆ. ಕ್ಯಾಂಬ್ರಿಡ್ಜ್ ವಿವಿಯು ಭಾರತದಲ್ಲಿನ ಕೊರೋನ ಸೋಂಕು ಪ್ರಕರಣದ ಜಾಡು ಪತ್ತೆ ಪ್ರಕ್ರಿಯೆಯನ್ನು ಅಭಿವೃದ್ಧಿಗೊಳಿಸಿದೆ.
ಹೊಸ ಸೋಂಕು ಪ್ರಕರಣಗಳು ಕೆಲವೇ ದಿನಗಳಲ್ಲಿ , ಬಹುಷಃ ಈ ವಾರದ ಒಳಗೆ ಏರಿಕೆಯಾಗತೊಡಗುತ್ತದೆ. ಆದರೆ ದೈನಂದಿನ ಪ್ರಕರಣಗಳು ಯಾವ ಪ್ರಮಾಣದಲ್ಲಿ ಹೆಚ್ಚಬಹುದು ಎಂಬುದನ್ನು ಊಹಿಸಲು ಕಷ್ಟವಾಗಿದೆ ಎಂದು ಪಾಲ್ ಹೇಳಿದ್ದಾರೆ.
ತಮ್ಮ ತಂಡ ಅಭಿವೃದ್ಧಿಪಡಿಸಿದ ಇಂಡಿಯಾ ಕೋವಿಡ್ ಟ್ರಾಕರ್‌ನಲ್ಲಿ ಭಾರತದಾದ್ಯಂತ ಕೊರೋನ ಸೋಂಕು ಪ್ರಕರಣದಲ್ಲಿ ತೀವ್ರ ಹೆಚ್ಚಳವಾಗಲಿರುವುದು ಕಂಡುಬಂದಿದೆ. ಡಿ.24ರಂದು ಆರು ರಾಜ್ಯಗಳಲ್ಲಿ ಗಮನಾರ್ಹ ಆತಂಕದ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲಲಾಗಿದ್ದು ಹೊಸ ಪ್ರಕರಣಗಳ ಹೊಂದಾಣಿಕೆ ಪ್ರಮಾಣ 5% ಮೀರಿದೆ. ಡಿ. 26ರ ವೇಳೆಗೆ ಇದು ಭಾರತದ 11 ರಾಜ್ಯಗಳಿಗೆ ವಿಸ್ತರಿಸಿದೆ ಎಂದವರು ಹೇಳಿದ್ದಾರೆ. ಭಾರತದಲ್ಲಿ ಬುಧವಾರ 9,195 ಕೋವಿಡ್ ಸೋಂಕು ಪ್ರಕರಣ ದಾಖಲಾಗಿದ್ದು ಕಳೆದ 3 ವಾರದಲ್ಲಿ ಇದು ಅತ್ಯಧಿಕ ದೈನಂದಿನ ಸೋಂಕು ಪ್ರಕರಣವಾಗಿದೆ. ಇದರೊಂದಿಗೆ ಒಟ್ಟು ಸೋಂಕು ಪ್ರಕರಣ 34.8 ಮಿಲಿಯನ್ ಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ.