×
Ad

ದಕ್ಷಿಣ ಆಫ್ರಿಕ ಗೆಲುವಿಗೆ 305 ರನ್‌ಗಳ ಕಠಿಣ ಗುರಿ

Update: 2021-12-29 23:32 IST
photo:PTI

ಸೆಂಚೂರಿಯನ್ (ದಕ್ಷಿಣ ಆಫ್ರಿಕ), ಡಿ. 29: ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ನಾಲ್ಕನೇ ದಿನವಾದ ಬುಧವಾರ ಭಾರತವು ತನ್ನ ಎರಡನೇ ಇನಿಂಗ್ಸ್‌ನಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 174 ರನ್‌ಗಳನ್ನು ಗಳಿಸಿತು ಹಾಗೂ ಆತಿಥೇಯ ತಂಡದ ಗೆಲುವಿಗೆ 305 ರನ್‌ಗಳ ಬೃಹತ್ ಗುರಿಯನ್ನು ನಿಗದಿಪಡಿಸಿತು. ದಿನದಾಟ ಮುಗಿದಾಗ ದಕ್ಷಿಣ ಆಫ್ರಿಕವು ತನ್ನ ದ್ವಿತೀಯ ಇನಿಂಗ್ಸ್ ನಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 94 ರನ್‌ಗಳನ್ನು ಗಳಿಸಿದೆ. ಕೊನೆಯ ದಿನವಾದ ಗುರುವಾರ ಪಂದ್ಯ ಗೆಲ್ಲಲು ಅದು ಇನ್ನೂ 211 ರನ್‌ಗಳನ್ನು ಗಳಿಸಬೇಕಾಗಿದೆ.

ಇದಕ್ಕೂ ಮುನ್ನ, ಒಂದು ವಿಕೆಟ್ ನಷ್ಟಕ್ಕೆ 16 ರನ್ ಇದ್ದಲ್ಲಿಂದ ಬುಧವಾರ ತನ್ನ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಭಾರತ, ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಯಾವ ಆಟಗಾರನಿಗೂ ಕ್ರೀಸ್‌ನಲ್ಲಿ ನೆಲೆಯೂರಿ ದೊಡ್ಡ ಇನಿಂಗ್ಸೊಂದನ್ನು ಕಟ್ಟಲು ಸಾಧ್ಯವಾಗಲಿಲ್ಲ.

ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 23 ರನ್ ಗಳಿಸಿ ನಿರ್ಗಮಿಸಿದರು. ಮಯಾಂಕ್ ಅಗರ್‌ವಾಲ್ ವಿಕೆಟ್ ಮಂಗಳವಾರವೇ ಉರುಳಿತ್ತು. ಶಾರ್ದೂಲ್ ಠಾಕೂರ್ (10) ಮತ್ತು ಚೇತೇಶ್ವರ್ ಪೂಜಾರ (16) ತಂಡದ ಮೊತ್ತಕ್ಕೆ ಹೆಚ್ಚಿನ ದೇಣಿಗೆ ನೀಡಲಿಲ್ಲ. ನಾಯಕ ವಿರಾಟ್ ಕೊಹ್ಲಿ 18 ಮತ್ತು ಅಜಿಂಕ್ಯ ರಹಾನೆ 20 ರನ್‌ಗಳಿಗೆ ತೃಪ್ತಿ ಕಂಡರು. ವಿಕೆಟ್‌ಕೀಪರ್ ರಿಶಭ್ ಪಂತ್ 34 ಎಸೆತಗಳಲ್ಲಿ 34 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರ್‌ದಾರರಾದರು. ರವಿಚಂದ್ರನ್ ಅಶ್ವಿನ್ 14 ಮತ್ತು ಜಸ್ಪ್ರೀತ್ ಬುಮ್ರಾ 7 ರನ್‌ಗಳನ್ನು ಗಳಿಸಿದರು.

ಭಾರತೀಯ ಬ್ಯಾಟರ್‌ಗಳಿಗೆ ಕಡಿವಾಣವನ್ನು ಹಾಕಿದವರು ದಕ್ಷಿಣ ಆಫ್ರಿಕದ ವೇಗಿ ಕಗಿಸೊ ರಬಡ. ಅವರು 17 ಓವರ್‌ಗಳಲ್ಲಿ 42 ರನ್ ನೀಡಿ 4 ವಿಕೆಟ್‌ಗಳನ್ನು ಉರುಳಿಸಿದರು. ಅವರಿಗೆ ಸರಿಸಾಟಿಯಾದವರು ಮಾರ್ಕೊ ಜಾನ್ಸನ್. ಅವರು 55 ರನ್‌ಗಳನ್ನು ನೀಡಿ 4 ವಿಕೆಟ್‌ಗಳನ್ನು ಪಡೆದರು. ಉಳಿದ 2 ವಿಕೆಟ್‌ಗಳನ್ನು ಲುಂಗಿ ಎಂಗಿಡಿ ಉರುಳಿಸಿದರು.

ಪಂದ್ಯ ಗೆಲ್ಲಲು 305 ರನ್ ಗಳಿಸುವ ಬೃಹತ್ ಗುರಿಯೊಂದಿಗೆ ದ. ಆಫ್ರಿಕ ತನ್ನ ದ್ವಿತಿಯ ಇನಿಂಗ್ಸ್ ಆರಂಭಿಸಿತು. ಆದರೆ ದಿನದಾಟದ ಮುಕ್ತಾಯದ ವೇಳೆಗೆ ಅದು 94 ರನ್ ಗಳಿಸುವಷ್ಟರಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಆರಂಭಿಕ ಏಡನ್ ಮಕ್ರಾಮ್ (1) ಬೇಗನೇ ನಿರ್ಗಮಿಸಿದರು. ಕೀಗನ್ ಪೀಟರ್ಸನ್ 17 ರನ್‌ಗಳ ದೇಣಿಗೆ ನೀಡಿದರೆ, ರಾಸೀ ವಾಂಡರ್ ಡಸನ್ 11 ರನ್‌ಗಳನ್ನು ಮಾಡಿದರು. ಕೇಶವ್ ಮಹಾರಾಜ್‌ಗೆ 8 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಆದರೆ ನಾಯಕ ಎಲ್ಗರ್ (52) ಮಾತ್ರ ಧೀರೋದಾತ್ತ ಪ್ರದರ್ಶನ ನೀಡಿದ್ದು 4ನೇ ದಿನದಾಟದ ಅಂತ್ಯಕ್ಕೆ ಕ್ರೀಸ್‌ನಲ್ಲಿ ಉಳಿದಿದ್ದಾರೆ. ಭಾರತದ ಪರವಾಗಿ ಜಸ್ಪ್ರೀತ್ ಬುಮ್ರಾ 2 ವಿಕೆಟ್‌ಗಳನ್ನು ಉರುಳಿಸಿದರೆ, ಮುಹಮ್ಮದ್ ಶಮಿ ಮತ್ತು ಮುಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಉರುಳಿಸಿದರು.

ಶತಕವಿಲ್ಲದೆ 2ನೇ ವರ್ಷ ಪೂರೈಸಿದ ಕೊಹ್ಲಿ

ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ರಹಿತ 2ನೇ ವರ್ಷವನ್ನು ಪೂರೈಸಿದ್ದಾರೆ. ದಕ್ಷಿಣ ಆಫ್ರಿಕ ವಿರುದ್ಧದ ಪ್ರಥಮ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಅವರು ಬುಧವಾರ 18 ರನ್ ಗಳಿಸಿ ನಿರ್ಗಮಿಸಿದರು. 2020ರಲ್ಲೂ ಕೊಹ್ಲಿ 3 ಅಂಕಿಗಳ ಮೊತ್ತವನ್ನು ದಾಖಲಿಸಲು ವಿಫಲರಾಗಿದ್ದರು.

ಕೊಹ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊನೆಯ ಬಾರಿಗೆ ಶತಕವೊಂದನ್ನು ದಾಖಲಿಸಿದ್ದು 2019ರಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಹಗಲು-ರಾತ್ರಿ ಟೆಸ್ಟ್‌ನಲ್ಲಿ. ದಕ್ಷಿಣ ಆಫ್ರಿಕದ ಬೌಲರ್ ಮಾರ್ಕೊ ಜಾನ್ಸನ್ ಎಸೆತದಲ್ಲಿ ಕೊಹ್ಲಿ ಔಟಾದರು.

ಸಂಕ್ಷಿಪ್ತ ಸ್ಕೋರ್

► ಭಾರತ ಮೊದಲ ಇನಿಂಗ್ಸ್ 327

► ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್ 197

► ಭಾರತ ದ್ವಿತೀಯ ಇನಿಂಗ್ಸ್ 174

► ದ. ಆಫ್ರಿಕ ದ್ವಿತೀಯ ಇನಿಂಗ್ಸ್ 94/4

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News