ಮಾಧ್ಯಮವು ನ್ಯಾಯಾಂಗದ ಮೇಲೆ ನಂಬಿಕೆ, ವಿಶ್ವಾಸವಿರಿಸಬೇಕು: ಸಿಜೆಐ ರಮಣ

Update: 2021-12-30 18:17 GMT

ಮುಂಬೈ,ಡಿ.30: ನ್ಯಾಯಾಲಯದ ತೀರ್ಪುಗಳ ಕುರಿತು ‘ಧರ್ಮೋಪದೇಶ’ ಮಾಡುವ ಹಾಗೂ ನ್ಯಾಯಾಧೀಶರುಗಳನ್ನು ಖಳನಾಯಕರಂತೆ ಬಿಂಬಿಸುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಭಾರತದ ಮುಖ್ಯನ್ಯಾಯಮೂರ್ತಿ (ಸಿಜೆಐ) ಎನ್.ವಿ. ರಮಣ ತಿಳಿಸಿದ್ದಾರೆ.

ಮುಂಬೈ ಪ್ರೆಸ್ ಕ್ಲಬ್‌ನಲ್ಲಿ  ಬುಧವಾರ ನಡೆದ ರೆಡ್ ಇಂಕ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮುಖ್ಯ ಭಾಷಣ ಮಾಡಿದ ಅವರು ‘‘ನ್ಯಾಯಾಂಗವು ಬೃಹತ್ ಸ್ತಂಭವಾಗಿದೆ. ಎಲ್ಲಾ ರೀತಿಯ ಅಡೆತಡೆಗಳ ನಡುವೆಯೂ ಅದು ಸಾಂವಿಧಾನಿಕ ಗುರಿಗಳನ್ನು ಮುನ್ನಡೆಸಲು ಶ್ರಮಿಸುತ್ತಿದೆ. ಮಾಧ್ಯಮರಂಗವು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಹಾಗೂ ವಿಶ್ವಾಸವನ್ನಿರಿಸಿಕೊಳ್ಳಬೇಕು. ಪ್ರಜಾಪ್ರಭುತ್ವದ ಪ್ರಮುಖ ಪಾಲುದಾರನಾಗಿರುವ ಮಾಧ್ಯಮರಂಗವು ದುಷ್ಟಶಕ್ತಿಗಳ ಯೋಜಿತ ದಾಳಿಯಿಂದ ನ್ಯಾಯಾಂಗ ವ್ಯವಸ್ಥೆಯನ್ನು ರಕ್ಷಿಸುವ ಕರ್ತವ್ಯವನ್ನು ಹೊಂದಿದೆ. ಪ್ರಜಾಪ್ರಭುತ್ವವನ್ನು ಮುನ್ನಡೆಸುವ ಕಾರ್ಯಾಚರಣೆಯಲ್ಲಿ ಹಾಗೂ ರಾಷ್ಟ್ರೀಯ ಹಿತಾಸಕ್ತಿಯನ್ನು ಉತ್ತೇಜಿಸುವಲ್ಲಿ ನ್ಯಾಯಾಂಗ ಹಾಗೂ ಮಾಧ್ಯಮರಂಗ ಇವೆರಡೂ ಜೊತೆಗೂಡಬೇಕಾಗಿದೆ ಮತ್ತು ನಾವಿಬ್ಬರೂ ಜೊತೆಯಾಗಿ ಸಾಗಬೇಕಾಗಿದೆ.

ಪತ್ರಕರ್ತನಾಗಿ ತನ್ನ ಸಂಕ್ಷಿಪ್ತ ವೃತ್ತಿಜೀವನವನ್ನು ಸ್ಮರಿಸಿಕೊಂಡ ಸಿಜೆಐ ಅವರು ವೃತ್ತಿಪರ ಪತ್ರಕರ್ತರ ಬವಣೆಗಳನ್ನು ಪ್ರಸ್ತಾವಿಸಿದರು. ಅಧಿಕಾರದ ಮುಂದೆ ಸತ್ಯವನ್ನು ಹೇಳುವುದು ಹಾಗೂ ಸಮಾಜಕ್ಕೆ ಕನ್ನಡಿ ಹಿಡಿಯುವುದು ಮಾಧ್ಯಮಗಳ ಅಗಾಧವಾದ ಹೊಣೆಗಾರಿಕೆಯಾಗಿದೆ. ಪತ್ರಕರ್ತರು ಅಪಾರವಾದ ಒತ್ತಡವನ್ನು ಎದುರಿಸುತ್ತಾ ಇರಬೇಕಾಗುತ್ತದೆ ಸಮಕಾಲೀನ ಜಗತ್ತಿನಲ್ಲಿ ಪತ್ರಕರ್ತನಾಗಿ ಕೆಲಸ ಮಾಡುವುದೆಂದರೆ ಕತ್ತಿಯ ಅಲಗಿನ ಮೇಲೆ ನರ್ತಿಸಿದಂತೆ ಎಂದವರು ಹೇಳಿದರು. ರಾಜಕೀಯ ನಾಯಕರು, ಅಧಿಕಾರಿವರ್ಗ, ಎಲ್ಲಾ ವಿಧದ ಮಾಫಿಯಾಗಳು ಹಾಗೂ ಕಾನೂನು ಭಂಜಕರು ಇವರ್ಯಾರಿಗೂ ವೃತ್ತಿಪರ ಪತ್ರಕರ್ತರು ಹಿತವೆನಿಸುವುದಿಲ್ಲವೆಂದು ರಮಣ ವ್ಯಾಖ್ಯಾನಿಸಿದರು.

ಡಿಜಿಟಲ್ ಮಾಧ್ಯಮ ವೇದಿಕೆಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿನ ವರದಿಗಾರಿಕೆಗಳಿಂದಾಗಿ ಕೆಲವು ವಿಷಯಗಳಲ್ಲಿ ಒಳಿತಾಗಿದೆ. ಆದಾಗ್ಯೂ ಇವುಗಳಿಂದಾಗಿ ಪತ್ರಿಕೋದ್ಯಮದಲ್ಲಿ ಕೆಲವು ನಿರ್ದಿಷ್ಟ ಸಮಸ್ಯೆಗಳು ಉದ್ಭವಿಸಿದ್ದು, ಇದು ಕಳವಳಕಾರಿಯಾಗಿದೆ ಎಂದರು.

ರೇಟಿಂಗ್ ಪಡೆಯುವ ಪೈಪೋಟಿಯಲ್ಲಿ, ಪ್ರಕಟಣೆಗೆ ಮುನ್ನ ಸುದ್ದಿ ಅಥವಾ ವರದಿಯನ್ನು ದೃಢಪಡಿಸಬೇಕಾದ ನಿಯಮದ ಪಾಲನೆಯಾಗುತ್ತಿಲ್ಲ. ಇದು ತಪ್ಪು ವರದಿಗಾರಿಕೆಗೆ ಕಾರಣವಾಗಿದೆ ಎಂದವರು ತಿಳಿಸಿದರು. ಸಾಮಾಜಿಕ ಜಾಲತಾಣಗಳು ಕ್ಷಣ ಮಾತ್ರದಲ್ಲಿ ತಪ್ಪು ಸುದ್ದಿಗಳನ್ನು ಪ್ರಕಟಿಸುತ್ತವೆ. ಒಮ್ಮೆ ಪ್ರಕಟವಾದಲ್ಲಿ ಅದನ್ನು ಹಿಂತೆಗೆಯುವುದು ಕಷ್ಟಸಾಧ್ಯ. ಮುದ್ರಣ ಹಾಗೂ ಇಲೆಕ್ಟ್ರಾನಿಕ್ ಮಾಧ್ಯಮಗಳಂತಲ್ಲದೆ. ಯೂಟ್ಯೂಬ್‌ನಂತಹ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಜನರ ಬದುಕು ಹಾಗೂ ವೃತ್ತಿಯನ್ನು ಹಾಳಗೆಡವಬಲ್ಲಂತಹ ನಿಂದನಾತ್ಮಕ ಹಾಗೂ ಮಾನಹಾನಿಕಾರಕ ಸುದ್ದಿಗಳನ್ನು ಪ್ರಸಾರ ಮಾಡಿದರೂ ಕೂಡಾ ಅವುಗಳನ್ನು ತಡೆಗಟ್ಟಲು ಅಸಾಧ್ಯವಾಗಿದೆ. ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಮುಂದೆ ಬರುವಂತೆ ಸಿಜೆಐ ಅವರು ಮಾಮರಂಗದ ಮಂದಿಗೆ ಮನವಿ ಮಾಡಿದರು.

ಸುದ್ದಿಯ ವರದಿಗಾರಿಕೆಯಲ್ಲಿ ತಮ್ಮ ಸೈದ್ಧಾಂತಿಕ ನಿಲುವುಗನ್ನು ಹಾಗೂ ಪೂರ್ವಾಗ್ರಹಗಳನ್ನು ತೂರಿಸುವಂತಹ ಪ್ರವೃತ್ತಿ ಹೆಚ್ಚುತ್ತಿರುವುದನ್ನೂ ಕೂಡಾ ತಾನು ಗಮನಿಸಿರುವುದಾಗಿ ರಮಣ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News