ಮುಸ್ಲಿಮರ ಹತ್ಯೆಗೆ ಕರೆ ನೀಡಿದವರ ಬಗ್ಗೆ ಮೌನ ತಾಳಿದ ಪ್ರಧಾನಿ ಮೋದಿ ವಿರುದ್ಧ ನಾಸಿರುದ್ದೀನ್ ಶಾ ವಾಗ್ದಾಳಿ
ಹೊಸದಿಲ್ಲಿ: ಭಾರತದಲ್ಲಿ ಮುಸ್ಲಿಮರ ನರಮೇಧಕ್ಕೆ ಕರೆ ನೀಡಿದ ಬಲಪಂಥೀಯರ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ತಾಳಿರುವ ಮೌನದ ಕುರಿತಂತೆ ಕಿಡಿಕಾರಿರುವ ಹಿರಿಯ ನಟ ನಾಸಿರುದ್ದೀನ್ ಶಾ, "ಅವರಿಗೆ ಅದರ ಗೊಡವೆಯೇ ಇಲ್ಲ, ಬದಲು ಇಂತಹ ಕರೆಗಳಿಂದ ಅವರಿಗೊಂದು ಖುಷಿ ದೊರೆಯುತ್ತದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಅವರಿಗೆ (ಪ್ರಧಾನಿ ಮೋದಿ) ಇವುಗಳ ಕುರಿತು ಪರಿವೆಯೇ ಇಲ್ಲ. ಕಾಳಜಿಯಂತೂ ಇಲ್ಲವೇ ಇಲ್ಲ. ಈ ಸಂದರ್ಭದಲ್ಲಿ ಅವರದ್ದು ʼಬೂಟಾಟಿಕೆʼ ಎಂದು ಆರೋಪಿಸಲೂ ಸಾಧ್ಯವಿಲ್ಲ. ಅಹ್ಮದಾಬಾದ್ ನ ಕಾರ್ಯಕ್ರಮದ ಕುರಿತು ಇವರು ಒಂದೇ ಒಂದು ಕ್ಷಮೆಯ ಮಾತುಗಳನ್ನಾಡಿಲ್ಲ. ಯಾವುದೇ ವಿಚಾರದ ಕುರಿತೂ ಕ್ಷಮೆ ಕೇಳಲೇ ಇಲ್ಲ. ರೈತರಿಗೆ ಸಂಬಂಧಿಸಿದಂತೆ ಅರೆ ಮನಸ್ಸಿನಿಂದ ಕ್ಷಮೆಯಾಚಿಸಿದ್ದರು. ಇಂತಹಾ ಜನರ ಬಗ್ಗೆ ಒಂದೇ ಒಂದು ಟೀಕೆಯಿಲ್ಲ. ವಾಸ್ತವವಾಗಿ, ಅಂತಹವರನ್ನು ಇವರೇ ಟ್ವಿಟರ್ ನಲ್ಲಿ ಫಾಲೋ ಮಾಡುತ್ತಿದ್ದಾರೆ. ಇದರಲ್ಲೆಲ್ಲಾ ಅವರಿಗೆ ಒಂದು ರೀತಿಯ ಖುಷಿಯಿದೆ" ಎಂದು ಶಾ ಹೇಳಿದ್ದಾರೆ.
``ಮುಸ್ಲಿಮರ ಹತ್ಯೆಗೆ ಕರೆ ನೀಡಿದ ಈ ಜನರಿಗೆ ಏನಾಗಬಹುದೆಂಬ ಕುತೂಹಲ ನನಗಿತ್ತು. ಆದರೆ ಅವರಿಗೇನೂ ಆಗದೇ ಇರುವುದು ಅಚ್ಚರಿಯಿಲ್ಲ. ಪುತ್ರ ರೈತರ ಮೇಲೆ ವಾಹನ ಹರಿಸಿದ್ದರೂ ಆ ವ್ಯಕ್ತಿಗೆ (ಕೇಂದ್ರ ಸಚಿವ) ಏನೂ ಆಗಿಲ್ಲ" ಎಂದು ಶಾ ಹೇಳಿದರು.
"ತಾವೇನು ಮಾಡುತ್ತಿದ್ದೇವೆ ಎಂಬುವುದು ಇವರಿಗೆ ತಿಳಿದಿದ್ದರೆ ಎಂದು ನಾನು ಅಚ್ಚರಿಪಡುತ್ತಿದ್ದೇನೆ. ಏಕೆಂದರೆ ಇವರು ಪೂರ್ಣಪ್ರಮಾಣದ ಅಂತರ್ಯುದ್ಧಕ್ಕೆ ಕರೆ ನೀಡುತ್ತಿದ್ದಾರೆ. ನಮ್ಮಲ್ಲಿರುವ 200 ಮಿಲಿಯನ್ ಜನರು ಅಷ್ಟು ಸುಲಭದಲ್ಲಿ ನಾಶವಾಗುವುದಿಲ್ಲ. ಆ 200 ಮಿಲಿಯನ್ ಮಂದಿ ಮತ್ತೆ ಹೋರಾಡುತ್ತಾರೆ. ನಾವು ಈ ಮಣ್ಣಿಗೆ ಸೇರಿದವರು. ಅಂತಹ ಯಾವುದೇ ಪ್ರತಿರೋಧ ಚಳವಳಿ ಪ್ರಾರಂಭವಾದರೆ ಅದು ದೊಡ್ಡ ಪ್ರಮಾಣದ ಅನಾಹುತವನ್ನು ಎದುರಿಸಲಿದೆ ಎಂಬುವುದು ನನಗೆ ಖಾತ್ರಿಯಿದೆ" ಎಂದು ಶಾ ಹೇಳಿದ್ದಾರೆ.
"ಮುಸ್ಲಿಮರಲ್ಲಿ ಅಸುರಕ್ಷತೆಯ ಭಾವನೆ ಮೂಡಿಸುವ ಒಂದು ಯತ್ನ ನಡೆಯುತ್ತಿದೆ ಎಂದು ನನಗನಿಸುತ್ತದೆ. ಇದು ಮೇಲಿನವರಿಂದಲೇ ಆರಂಭಗೊಳ್ಳುತ್ತದೆ ಹಾಗೂ ಔರಂಗ್‍ಜೇಬ್, ಮೊಘಲ್ ಆಕ್ರಮಣಕಾರರ ಉಲ್ಲೇಖವಾಗುತ್ತದೆ. ಪ್ರತ್ಯೇಕತಾವಾದವೆಂಬುದು ಆಡಳಿತ ಪಕ್ಷದ ಒಂದು ನೀತಿಯಂತಾಗಿದೆ" ಎಂದು ಅವರು ಹೇಳಿದರು.