ವಿಮಾನಗಳಲ್ಲಿ, ಏರ್‌ ಪೋರ್ಟ್‌ ಗಳಲ್ಲಿ ಭಾರತೀಯ ಸಂಗೀತ ಹಾಕುವಂತೆ ಕೇಂದ್ರ ಸರಕಾರ ಸೂಚನೆ

Update: 2021-12-30 09:09 GMT

ಹೊಸದಿಲ್ಲಿ: ಕಳೆದ ವಾರ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ಮಾಡಿದ ಮನವಿಯ ಮೇರೆಗೆ ನಾಗರಿಕ ವಿಮಾನಯಾನ ಸಚಿವಾಲಯವು ಭಾರತೀಯ ವಿಮಾನಯಾನ ಸಂಸ್ಥೆಗಳು ಮತ್ತು ದೇಶದ ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತವನ್ನು ನುಡಿಸುವಂತೆ ಪತ್ರ ಬರೆದಿದೆ.

"ನಿಯಂತ್ರಕ ಅಗತ್ಯತೆಗಳನ್ನು ಅನುಸರಿಸಿ ವಿಮಾನ ನಿಲ್ದಾಣಗಳಲ್ಲಿ ಮತ್ತು ಕಾರ್ಯನಿರ್ವಹಿಸುತ್ತಿರುವ ವಿಮಾನಗಳಲ್ಲಿ ಭಾರತೀಯ ಸಂಗೀತವನ್ನು ನುಡಿಸುವುದನ್ನು  ಪರಿಗಣಿಸಲು ವಿನಂತಿಸಲಾಗಿದೆ" ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಉಷಾ ಪಾಧೀ ಅವರು ಡಿಸೆಂಬರ್ 27 ರಂದು ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ʼಯಾವ ಸಂಗೀತವನ್ನು ಭಾರತೀಯ ಎಂದು ಪರಿಗಣಿಸಲಾಗುತ್ತದೆ?ʼ ಎಂಬುದನ್ನು ಸಚಿವಾಲಯವು ವ್ಯಾಖ್ಯಾನಿಸದಿದ್ದರೂ, "ಭಾರತೀಯ ಸಂಗೀತವು ಶಾಸ್ತ್ರೀಯ ಸಂಗೀತ, ಜನಪದ, ಲಘು ಗಾಯನ, ವಾದ್ಯಸಂಗೀತವನ್ನು ಒಳಗೊಂಡಂತೆ ಹಲವಾರು ಪ್ರಕಾರಗಳನ್ನು ಒಳಗೊಂಡಿದೆ" ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

ಕಳೆದ ವಾರ, ICCR ಅಧ್ಯಕ್ಷ ಮತ್ತು ರಾಜ್ಯಸಭೆಯ ಬಿಜೆಪಿ ಸಂಸದ, ವಿನಯ್ ಸಹಸ್ರಬುದ್ಧೆ ಹಲವಾರು ಕಲಾವಿದರು ಮತ್ತು ಗಾಯಕರ ಸಮ್ಮುಖದಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪತ್ರವನ್ನು ಹಸ್ತಾಂತರಿಸಿದ್ದರು.  “ಭಾರತದ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಹೆಚ್ಚಿನ ವಿಮಾನಯಾನ ಸಂಸ್ಥೆಗಳು, ಹಾಗೆಯೇ ದೇಶೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು, ಅಪರೂಪವೆಂಬಂತೆ ಭಾರತೀಯ ಸಂಗೀತವನ್ನು ನುಡಿಸುತ್ತಿರುವುದು ಅತ್ಯಂತ ದುರದೃಷ್ಟಕರ. ನಮ್ಮ ಸಂಗೀತವು ನಮ್ಮ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಪ್ರತಿಯೊಬ್ಬ ಭಾರತೀಯನು ನಿಜವಾಗಿಯೂ ಹೆಮ್ಮೆಪಡಲು ಕಾರಣವಿರುವ ಅನೇಕ ವಿಷಯಗಳಲ್ಲಿ ಇದು ಒಂದಾಗಿದೆ" ಎಂದು ಪತ್ರದಲ್ಲಿ ಹೇಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News