×
Ad

ಜಮ್ಮು ಕಾಶ್ಮೀರ: ‘ಜೈಶ್ರೀರಾಮ್’ ಘೋಷಣೆ ಕೂಗುವಂತೆ ಕ್ರೈಸ್ತ ಪಾದ್ರಿಗೆ ಬಲವಂತ

Update: 2021-12-30 22:02 IST
photo:twitter/@KimHaokipINC

ಶ್ರೀನಗರ, ಡಿ. 30: ಕ್ರಿಸ್ಮಸ್ ದಿನ ತಮ್ಮ ಅಪೇಕ್ಷೆಯಂತೆ ‘ಜೈ ಶ್ರೀರಾಮ್’ ಘೋಷಣೆ ಕೂಗಲು ನಿರಾಕರಿಸಿದ ಮಣಿಪುರದ ಕ್ರೈಸ್ತ ಪಾದ್ರಿಗೆ ಸಂಘಪರಿವಾದ ಕಾರ್ಯಕರ್ತರು ಕಿರುಕುಳ ನೀಡಿದ ಘಟನೆ ಜಮ್ಮು ಹಾಗೂ ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆಯ ವೀಡಿಯೊ ಡಿಸೆಂಬರ್ 30ರಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಗುರುವಾರ ಕ್ರೈಸ್ತ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವ್ಯಾಟ್ಸ್ ಆ್ಯಪ್ ಗುಂಪು ಹಾಗೂ ಟ್ವಿಟರ್ ನಲ್ಲಿ ಪ್ರಸಾರವಾದ ಈ ಸಣ್ಣ ವೀಡಿಯೊ ತುಣುಕಿನಲ್ಲಿ, ಜೈ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಪಾದ್ರಿಯನ್ನು ಇಬ್ಬರು ವ್ಯಕ್ತಿಗಳು ಬಲವಂತಪಡಿಸುತ್ತಿರುವುದು, ಈ ಪ್ರದೇಶದಲ್ಲಿ ನೀವು ಮತಾಂತರ ಮಾಡುತ್ತೀರಿ ಎಂದು ಆರೋಪಿಸುತ್ತಿರುವುದು ಕೇಳಿ ಬಂದಿದೆ. ‘‘ನೀವು ಎಲ್ಲಿಂದ ಬಂದಿರಿ? ಇಲ್ಲಿಗೆ ನಿಮ್ಮನ್ನು ಯಾರು ಕರೆ ತಂದರು’’ ಎಂದ ಅವರು ಮತ್ತೆ ಮತ್ತೆ ಪಾದ್ರಿಯನ್ನು ಅವರು ಪ್ರಶ್ನಿಸುತ್ತಿರುವುದು ಕೇಳಿ ಬಂದಿದೆ.

ಭೀತರಾದಂತೆ ಕಾಣುವ ಪಾದ್ರಿ, ತಾನು ಇಲ್ಲಿಗೆ ಬರುವ ಮುನ್ನ ಭೇಟಿಯಾದ ಕುಟುಂಬ ಕ್ರೆಸ್ತರದ್ದು ಎಂದು ಹೇಳಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ. ಆದರೂ ಸಂಘ ಪರಿವಾರದ ಕಾರ್ಯಕರ್ತರು ಅವರಲ್ಲಿ ‘‘ಜೈ ಶ್ರೀರಾಮ್’’ ಎಂದು ಘೋಷಣೆ ಕೂಗುವಂತೆ ಬಲವಂತಪಡಿಸಿದ್ದಾರೆ. ಅಲ್ಲದೆ, ನಿಮಗೆ ಘೋಷಣೆ ಕೂಗಲು ಯಾಕೆ ಆಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಒಮ್ಮೆ ಅವರು ತಮ್ಮಂತೆ ‘ಜೈ ಶ್ರೀರಾಮ್’ ಎಂದು ಘೋಷಣೆಗಳನ್ನು ಕೂಗಲು ಸೇರಿದ್ದ ಜನರನ್ನು ಉತ್ತೇಜಿಸಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾದ್ರಿ ಚುಂಗ್ಲೆಂಗ್ಲಾಲ್ ಸಿಂಗ್ಸಿತ್, ‘‘ಕ್ರಿಸ್ಮಸ್ ದಿನ ಸಂಜೆ 3 ಗಂಟೆಗೆ ಈ ಘಟನೆ ನಡೆದಿದೆ. ಕಥುವಾದ ಸಮೀಪದಲ್ಲಿರುವ ಅನುಯಾಯಿಯ ಮನೆಗೆ ಪ್ರಾರ್ಥನೆ ಸಲ್ಲಿಸಲು ಹೋಗಿದ್ದೆ. ಮನೆಗೆ ಹಿಂದಿರುಗಿದ್ದೆ.

ಅನಂತರ ನನ್ನ ಮೂವರು ಮಕ್ಕಳಿಗೆ ಕೆಲವು ಉಡುಗೊರೆ ಖರೀದಿಸಲು ಮಾರುಕಟ್ಟೆಗೆ ತೆರಳಿದ್ದೆ. ಆಗ ನನ್ನನ್ನು ಇಬ್ಬರು ನಿಲ್ಲಿಸಿದ್ದರು. ಅಂದು ನಾನು ಭೇಟಿಯಾದ ಕುಟುಂಬವನ್ನು ಮತಾಂತರಗೊಳಿಸುತ್ತಿದ್ದೇನೆ ಎಂದು ಆರೋಪಿಸಿದ್ದರು. ಅಲ್ಲದೆ, ಜೈ ಶ್ರೀರಾಮ್ ಘೋಷಣೆ ಕೂಗಲು ಬಲವಂತಪಡಿಸಿದ್ದರು’’ ಎಂದರು. ಮತಾಂತರದ ಆರೋಪವನ್ನು ಪಾದ್ರಿ ಹಾಗೂ ಪೊಲೀಸರು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News