ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತವನ್ನು ಮಣಿಸಿದ್ದು ಪಾಕಿಸ್ತಾನದ ಪಾಲಿಗೆ ಶ್ರೇಷ್ಠ ಕ್ಷಣವಾಗಿತ್ತು: ಬಾಬರ್ ಆಝಮ್
Update: 2022-01-01 23:32 IST
ಕರಾಚಿ, ಜ.1: ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತವನ್ನು ಮಣಿಸಿರುವುದು 2021ರಲ್ಲಿ ಪಾಕಿಸ್ತಾನದ ಪಾಲಿಗೆ ಶ್ರೇಷ್ಠ ಕ್ಷಣವಾಗಿತ್ತು ಎಂದು ಪಾಕಿಸ್ತಾನದ ನಾಯಕ ಬಾಬರ್ ಆಝಮ್ ಅಭಿಪ್ರಾಯಪಟ್ಟಿದ್ದಾರೆ.
ಟ್ವೆಂಟಿ-20 ವಿಶ್ವಕಪ್‌ನ ಸೆಮಿ ಫೈನಲ್ ಹಂತದಲ್ಲಿ ಆಸ್ಟ್ರೇಲಿಯ ವಿರುದ್ಧ ಸೋತಿರುವುದು ಇಡೀ ತಂಡಕ್ಕೆ ತೀವ್ರ ಬೇಸರ ತಂದಿತ್ತು. ಆ ಸೋಲು ನಮಗೆ ಹೆಚ್ಚು ನೋವು ಕೊಟ್ಟಿತ್ತು. ಏಕೆಂದರೆ ನಾವು ಒಗ್ಗಟ್ಟಿನಿಂದ ಅತ್ಯಂತ ಉತ್ತಮವಾಗಿ ಆಡಿದ್ದೆವು ಎಂದು ಬಾಬರ್ ಹೇಳಿದ್ದಾರೆ. ವಿಶ್ವಕಪ್‌ನಲ್ಲಿ ಮೊದಲ ಬಾರಿ ಭಾರತವನ್ನು ಮಣಿಸಿರುವುದು ತಂಡದ ಪಾಲಿಗೆ ಮಹತ್ವದ ಸಾಧನೆಯಾಗಿದೆ. ಏಕೆಂದರೆ ನಮಗೆ ಹಲವು ವರ್ಷಗಳಿಂದ ವಿಶ್ವಕಪ್ ಟೂರ್ನಿಯಲ್ಲಿ ಭಾರತವನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ. ಇದು ನಮ್ಮ ಪಾಲಿಗೆ ವರ್ಷದ ಶ್ರೇಷ್ಠ ಕ್ಷಣವಾಗಿತ್ತು ಎಂದು ಬಾಬರ್ ಹೇಳಿದರು. ಪಾಕಿಸ್ತಾನವು ಟ್ವೆಂಟಿ-20 ವಿಶ್ವಕಪ್‌ನ ಗ್ರೂಪ್ ಹಂತದಲ್ಲಿ ಭಾರತವನ್ನು 10 ವಿಕೆಟ್‌ಗಳ ಅಂತರದಿಂದ ಹೀನಾಯವಾಗಿ ಸೋಲಿಸಿತ್ತು.