×
Ad

ಮುಸ್ಲಿಂ ಮಹಿಳೆಯರ ಭಾವಚಿತ್ರ ದುರ್ಬಳಕೆ : ಆ್ಯಪ್ ವಿರುದ್ಧ ಆಕ್ರೋಶ

Update: 2022-01-02 07:52 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ವರ್ಷದಲ್ಲಿ ಎರಡನೇ ಬಾರಿಗೆ ಮುಸ್ಲಿಂ ಮಹಿಳೆಯರ ಭಾವಚಿತ್ರಗಳನ್ನು ವಂಚನೆಯ ಆ್ಯಪ್ ಒಂದರಲ್ಲಿ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಾರಿ ನೂರಾರು ಮಂದಿ ಮುಸ್ಲಿಂ ಮಹಿಳೆಯರ ಹೆಸರು ಪಟ್ಟಿ ಮಾಡಿ ಅವರ ಭಾವಚಿತ್ರದೊಂದಿಗೆ "ಹರಾಜಿಗಾಗಿ" ಎಂದು ಪ್ರಕಟಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಪತ್ರಕರ್ತರಾದ ಇಸ್ಮತ್ ಅರಾ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಮುಂಬೈನಲ್ಲೂ ತನಿಖೆ ಆರಂಭಿಸಲಾಗಿದೆ ಎಂದು ಶಿವಸೇನೆಯ ಸಂಸದೆ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.

"ಬುಲ್ಲಿ ಬಾಯ್" ಹೆಸರಿನ ಆ್ಯಪ್‌ನ ಆಕ್ಷೇಪಾರ್ಹ ಅಂಶಗಳ ಬಗ್ಗೆ ಮುಂಬೈ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬುಲ್ಲಿ ಬಾಯ್ ಬಲಪಂಥೀಯ ಸಾಮಾಜಿಕ ಜಾಲತಾಣ ಟ್ರೋಲ್‌ಗಳು ಮುಸ್ಲಿಂ ಮಹಿಳೆಯರನ್ನು "ಡೀಲ್ಸ್ ಆಫ್ ದ ಡೇ" ಎಂದು ಪ್ರಕಟಿಸಿ ವಿವಾದ ಹುಟ್ಟುಹಾಕಿದ್ದ ಸುಲ್ಲಿ ಡೀಲ್ಸ್‌ನ ಕ್ಲೋನ್ ಎನ್ನಲಾಗಿದೆ. ಇಲ್ಲಿ ಯಾವುದೇ ಮಾರಾಟದ ಅಂಶ ಇಲ್ಲವಾದರೂ, ಮುಸ್ಲಿಂ ಮಹಿಳೆಯರ ಘನತೆಗೆ ಚ್ಯುತಿ ತರುವುದು, ಅವಮಾನಿಸುವುದು ಮತ್ತು ಕಿರುಕುಳ ನೀಡುವುದು ಇದರ ಉದ್ದೇಶ.

ಸುಲ್ಲಿ ಡೀಲ್ಸ್ ಮಾದರಿಯಲ್ಲೇ ಬುಲ್ಲಿ ಬಾಯ್ ಕೂಡಾ ಕಾರ್ಯ ನಿರ್ವಹಿಸುತ್ತಿದೆ. ಇದನ್ನು ತೆರೆದ ತಕ್ಷಣ ಮುಸ್ಲಿಂ ಮಹಿಳೆಯರನ್ನು ಸಾಮಾಜಿಕ ಜಾಲತಾಣ ಬಳಕೆದಾರರಾಗಿ ಬಿಂಬಿಸುತ್ತದೆ. ಟ್ವಿಟ್ಟರ್‌ನಲ್ಲಿ ಪ್ರಮುಖವಾಗಿರುವ ಮಹಿಳೆಯರ ಭಾವಚಿತ್ರಗಳನ್ನು ಪ್ಲಾಟ್‌ ಫಾರ್ಮ್ ನಲ್ಲಿ ಪ್ರಕಟಿಸಲಾಗುತ್ತಿದೆ.

ಮೈಕ್ರೋಸಾಫ್ಟ್ ಮಾಲಕತ್ವದ ಸಾಫ್ಟ್‌ವೇರ್ ಶೇರಿಂಗ್ ಪ್ಲಾಟ್‌ ಫಾರ್ಮ್ ಗಿಟ್‌ ಹಬ್‌ನಲ್ಲಿ ಈ ಆ್ಯಪ್ ಕಾಣಿಸಿಕೊಂಡಿದೆ. ಗಿಟ್‌ ಹಬ್‌ನಲ್ಲಿ ಅಭಿವೃದ್ಧಿ ಹಂತದ ಆ್ಯಪ್ ಅಪ್‌ ಲೋಡ್ ಮಾಡಲು ಅವಕಾಶವಿದೆ. ಕಳೆದ ಬಾರಿ ವ್ಯಾಪಕ ಆಕ್ರೋಶದ ಬಳಿಕ ಸುಲ್ಲಿ ಬಾಯ್ ಆ್ಯಪ್ ಕಿತ್ತು ಹಾಕಲಾಗಿತ್ತು. ಆದರೆ ಕಳೆದ ಬಾರಿ ಮುಸ್ಲಿಮ್ ಮಹಿಳೆಯರ ಫೋಟೊ ದುರ್ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ಮಹತ್ವದ ಕಾನೂನು ಕ್ರಮವನ್ನೂ ಕೈಗೊಂಡಿರಲಿಲ್ಲ ಎಂದು ಪಿಟಿಐ ವರದಿಯಲ್ಲಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News