ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗಿಂತ ಅವರ ಪುತ್ರ ಐದು ಪಟ್ಟು ಹೆಚ್ಚು ಶ್ರೀಮಂತ: ವರದಿ
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರೂ. 75.36 ಲಕ್ಷ ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿ ಹೊಂದಿದ್ದು, ಅವರ ಪುತ್ರ ನಿಶಾಂತ್ ತನ್ನ ತಂದೆಗಿಂತ ಸುಮಾರು ಐದು ಪಟ್ಟು ಶ್ರೀಮಂತರಾಗಿದ್ದಾರೆ ಎಂದು hindustantimes ವರದಿ ಮಾಡಿದೆ.
ಡಿಸೆಂಬರ್ 31 ರಂದು ಬಿಹಾರ ಸರಕಾರದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಮುಖ್ಯಮಂತ್ರಿ ಹಾಗೂ ಅವರ ಸಂಪುಟ ಸಹೋದ್ಯೋಗಿಗಳ ಆಸ್ತಿ ವಿವರಗಳ ಪ್ರಕಾರ ಕುಮಾರ್ ರೂ. 29,385 ನಗದು ಹಾಗೂ ಸುಮಾರು ರೂ. 42,763 ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದರೆ, ಅವರ ಮಗ ನಿಶಾಂತ್ ರೂ. 16,549 ನಗದು ಹಾಗೂ ರೂ. 1.28 ಕೋಟಿ ಸ್ಥಿರ ಠೇವಣಿ (ಎಫ್‌ಡಿ) ಅಥವಾ ಠೇವಣಿಯನ್ನು ವಿವಿಧ ಬ್ಯಾಂಕ್‌ಗಳಲ್ಲಿ ಇರಿಸಿದ್ದಾರೆ.
ಕುಮಾರ್ ರೂ. 16.51 ಲಕ್ಷ ಮೌಲ್ಯದ ಚರ ಆಸ್ತಿಯನ್ನು ಹೊಂದಿದ್ದು, ಅವರ ಸ್ಥಿರ ಆಸ್ತಿಗಳ ಒಟ್ಟು ಮೌಲ್ಯ ರೂ. 58.85 ಲಕ್ಷ. ಅವರ ಮಗ ರೂ. 1.63 ಕೋಟಿ ಮೌಲ್ಯದ ಚರ ಆಸ್ತಿ ಹೊಂದಿದ್ದಾರೆ ಹಾಗೂ ಅವರ ಸ್ಥಿರ ಆಸ್ತಿ ಮೌಲ್ಯ ರೂ. 1.98 ಕೋಟಿ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಹೊಸದಿಲ್ಲಿಯ ದ್ವಾರಕಾದಲ್ಲಿ ಸಹಕಾರಿ ಹೌಸಿಂಗ್ ಸೊಸೈಟಿಯಲ್ಲಿ ಒಂದು ವಸತಿ ಫ್ಲಾಟ್ ಹೊಂದಿದ್ದರೆ, ಅವರ ಮಗ ಕಲ್ಯಾಣ ಬಿಘಾ ಮತ್ತು ಹಕಿಕತ್‌ಪುರ (ಎರಡೂ ನಳಂದಾ ಜಿಲ್ಲೆ) ಹಾಗೂ ಪಾಟ್ನಾದ ಕಂಕರ್‌ಬಾಗ್‌ನಲ್ಲಿ ಕೃಷಿ ಭೂಮಿ ಹಾಗೂ ವಸತಿ ಮನೆಗಳನ್ನು ಹೊಂದಿದ್ದಾರೆ.
ಘೋಷಣೆಯ ಪ್ರಕಾರ ನಿಶಾಂತ್ ತನ್ನ ಪೂರ್ವಜರ ಗ್ರಾಮ ಕಲ್ಯಾಣ ಬಿಘಾದಲ್ಲಿ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಇವರಿಗೆ ಗ್ರಾಮದಲ್ಲಿ ಕೃಷಿಯೇತರ ಭೂಮಿಯೂ ಇದೆ. ರೂ. 1.45 ಲಕ್ಷ ಮೌಲ್ಯದ 13 ಹಸುಗಳು ಮತ್ತು ಒಂಬತ್ತು ಕರುಗಳನ್ನು ಹೊಂದಿದ್ದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ.