ಪರವಾನಿಗೆ ತಡೆಹಿಡಿಯುವ ಕೇಂದ್ರದ ನಿರ್ಧಾರದಿಂದ ಮಾನವೀಯ ಕಾರ್ಯಗಳ ಮೇಲೆ ಪರಿಣಾಮ: ಆಕ್ಸ್‌ಫ್ಯಾಮ್ ಇಂಡಿಯಾ
ಹೊಸದಿಲ್ಲಿ,ಜ.2: ವಿದೇಶಗಳಿಂದ ದೇಣಿಗೆಗಳನ್ನು ಸ್ವೀಕರಿಸಲು ಅಗತ್ಯವಾಗಿರುವ ವಿದೇಶಿ ದೇಣಿಗೆಗಳ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ)ಯಡಿ ತನ್ನ ಪರವಾನಿಗೆಯನ್ನು ನವೀಕರಿಸಲು ನಿರಾಕರಿಸಿರುವ ಸರಕಾರದ ನಿರ್ಧಾರವು 16 ರಾಜ್ಯಗಳಲ್ಲಿ ಸಂಸ್ಥೆಯು ನಡೆಸುತ್ತಿರುವ ಮಾನವೀಯ ಮತ್ತು ಸಾಮಾಜಿಕ ಕಾರ್ಯಗಳನ್ನು ತೀವ್ರವಾಗಿ ಬಾಧಿಸಲಿದೆ ಎಂದು ಆಕ್ಸ್‌ಫಾಮ್ ಇಂಡಿಯಾ ಹೇಳಿದೆ.
ಗೃಹ ಸಚಿವಾಲಯವು ಜ.1ರಂದು ಬಿಡುಗಡೆಗೊಳಿಸಿರುವ ಪಟ್ಟಿಯಂತೆ ಆಕ್ಸ್‌ಫಾಮ್ ಇಂಡಿಯಾದ ಎಫ್‌ಸಿಆರ್‌ಎ ನೋಂದಣಿಯ ನವೀಕರಣ ಕೋರಿಕೆಯನ್ನು ನಿರಾಕರಿಸಲಾಗಿದೆ. ಇದರಿಂದಾಗಿ ಭಾರತದಲ್ಲಿ ತನ್ನ ಯಾವುದೇ ಕಾರ್ಯಕ್ಕೆ ವಿದೇಶಿ ಹಣವನ್ನು ಸ್ವೀಕರಿಸಲು ಅದಕ್ಕೆ ಸಾಧ್ಯವಾಗುವುದಿಲ್ಲ. ಸಚಿವಾಲಯದ ನಿರ್ಧಾರವು ಈ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಹೆಚ್ಚು ಅಗತ್ಯವಾಗಿರುವ ಆಮ್ಲಜನಕ ಘಟಕಗಳ ಸ್ಥಾಪನೆ,ಜೀವರಕ್ಷಕ ಔಷಧಿಗಳು ಮತ್ತು ರೋಗನಿರ್ಣಯ ಉಪಕರಣಗಳ ಪೂರೈಕೆ,ಅತ್ಯಂತ ದುರ್ಬಲ ಸಮುದಾಯಗಳಿಗೆ ಆಹಾರ ಪೂರೈಕೆಯಂತಹ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಆಕ್ಸ್‌ಫಾಮ್ ಇಂಡಿಯಾದ ಪ್ರಯತ್ನಗಳಿಗೆ ಅಡ್ಡಿಯನ್ನುಂಟು ಮಾಡಲಿದೆ ಎಂದು ಸಂಸ್ಥೆಯ ಸಿಇಒ ಅಮಿತಾಭ್ ಬೆಹರ್ ಹೇಳಿದರು.
‘ಈ ಎಲ್ಲ ವರ್ಷಗಳಲ್ಲಿ ನಾವು ಸದಾ ಸಾರ್ವಜನಿಕ ಹಿತಾಸಕ್ತಿಯಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ. ಬಡತನದ ಅನ್ಯಾಯವನ್ನು ನಿವಾರಿಸಲು ಶಾಶ್ವತ ಪರಿಹಾರಗಳ ಸೃಷ್ಟಿ,ಯಾರೂ ಹಿಂದುಳಿಯದಂತೆ ನೋಡಿಕೊಳ್ಳುವ,ತಾರತಮ್ಯ ಅಂತ್ಯಗೊಳಿಸುವ ಹಾಗೂ ಮುಕ್ತ ಮತ್ತು ನ್ಯಾಯಯುತ ಸಮಾಜ ಸೃಷ್ಟಿಯ ನೀತಿಯು ನಮಗೆ ಮಾಗದರ್ಶಕವಾಗಿದೆ ’ ಎಂದರು.
2020,ಸೆ.29 ಮತ್ತು 2021,ಡಿ.31ರ ನಡುವೆ ಅವಧಿ ಮುಗಿದಿದ್ದ 12,000ಕ್ಕೂ ಅಧಿಕ ಎನ್‌ಜಿಒಗಳ ಎಫ್‌ಸಿಆರ್‌ಎ ಪರವಾನಿಗೆಗಳು ಶನಿವಾರ ಅಂತ್ಯಗೊಂಡಿದ್ದವು. ಇವುಗಳಲ್ಲಿ ಆಕ್ಸ್‌ಫಾಮ್ ಇಂಡಿಯಾ ಮತ್ತು ಆಕ್ಸ್‌ಫಾಮ್ ಇಂಡಿಯಾ ಟ್ರಸ್ಟ್ ಸೇರಿವೆ.
ಡಿ.31ರಂದು ಒಂದೇ ದಿನ ಸುಮಾರು 6,000 ಪರವಾನಿಗೆಗಳ ಅವಧಿ ಮುಗಿದಿತ್ತು.
ಈ ಎನ್‌ಜಿಒಗಳಿಗೆ ಪರವಾನಿಗೆಗಳ ನವೀಕರಣಕ್ಕಾಗಿ ಜ್ಞಾಪನ ಪತ್ರಗಳನ್ನು ಕಳುಹಿಸಿದ್ದರೂ ಅವು ಅರ್ಜಿಗಳನ್ನು ಸಲ್ಲಿಸಿರಲಿಲ್ಲ ಎಂದು ಗೃಹಸಚಿವಾಲಯದಲ್ಲಿಯ ಮೂಲಗಳು ತಿಳಿಸಿವೆ. ನವೀಕರಣಕ್ಕಾಗಿ ಸಲ್ಲಿಸಿದ್ದ ಅರ್ಜಿಗಳ ಪೈಕಿ 179 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದೂ ಅವು ಹೇಳಿವೆ.