ಪೆಗಾಸಸ್ ಗೂಢಚರ್ಯೆ ಪ್ರಕರಣ:ಸಂಭಾವ್ಯ ಗುರಿಯಾಗಿರುವವರಿಂದ ವಿವರ ಕೇಳಿದ ತಾಂತ್ರಿಕ ಸಮಿತಿ

Update: 2022-01-02 17:45 GMT

ಹೊಸದಿಲ್ಲಿ,ಜ.2: ರಾಜಕಾರಣಿಗಳು, ಮಾನವ ಹಕ್ಕು ಹೋರಾಟಗಾರರು ಮತ್ತು ಪತ್ರಕರ್ತರ ದೂರವಾಣಿಗಳ ಮೇಲೆ ಕಣ್ಗಾವಲು ಇರಿಸಲು ಪೆಗಾಸಸ್ ಸ್ಪೈವೇರ್ ಬಳಸಲಾಗಿತ್ತು ಎಂಬ ಅರೋಪದ ಕುರಿತು ತನಿಖೆ ನಡೆಸಲು ಸರ್ವೋಚ್ಚ ನ್ಯಾಯಾಲಯವು ನೇಮಕಗೊಳಿಸಿರುವ ತಾಂತ್ರಿಕ ಸಮಿತಿಯು, ತಮ್ಮ ದೂರವಾಣಿಗಳನ್ನು ಗುರಿಯಾಗಿಸಿಕೊಳ್ಳಲಾಗಿತ್ತು ಎಂದು ಶಂಕಿಸಿರುವವರಿಂದ ವಿವರಗಳನ್ನು ಕೋರಿದೆ. ಇಂತಹ ವ್ಯಕ್ತಿಗಳು ಜ.7ರೊಳಗೆ ತನ್ನನ್ನು ಸಂಪರ್ಕಿಸುವಂತೆ ಅದು ಬಹಿರಂಗ ನೋಟಿಸಿನಲ್ಲಿ ಸೂಚಿಸಿದೆ.

ದೂರವಾಣಿಗಳನ್ನು ಪರೀಕ್ಷಿಸಲು ತಾನು ಸಿದ್ಧವಾಗಿರುವುದಾಗಿಯೂ ಸಮಿತಿಯು ಹೇಳಿದೆ.
ಇಸ್ರೇಲ್‌ನ ಎನ್ಎಸ್ಒ ಗ್ರೂಪ್ ನ ಪೆಗಾಸಸ್ ಸ್ಪೈವೇರ್ ಅನ್ನು ವಿಶ್ವಾದ್ಯಂತ ಹಲವರ ಮೇಲೆ ಕಣ್ಗಾವಲು ಇರಿಸಲು ಬಳಸಲಾಗಿದೆ ಎಂಬ ವರದಿಗಳಿಂದಾಗಿ ಬೃಹತ್ ರಾಜಕೀಯ ಬಿರುಗಾಳಿಯೆದ್ದ ಬಳಿಕ ಕಳೆದ ಅಕ್ಟೋಬರ್ ನಲ್ಲಿ ತನಿಖೆಗೆ ಆದೇಶಿಸಿದ್ದ ಸರ್ವೋಚ್ಚ ನ್ಯಾಯಾಲಯವು ತಾಂತ್ರಿಕ ಸಮಿತಿಯನ್ನು ರಚಿಸಿತ್ತು.

ಭಾರತದಲ್ಲಿ 142ಕ್ಕೂ ಅಧಿಕ ಜನರನ್ನು ಗುರಿಯಾಗಿಸಿಕೊಳ್ಳಲಾಗಿತ್ತು ಎಂದು ಸುದ್ದಿ ಜಾಲತಾಣ ‘ದಿ ವೈರ್’ ಹೇಳಿದ್ದರೆ, ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಸೆಕ್ಯುರಿಟಿ ಲ್ಯಾಬ್ ನಡೆಸಿದ್ದ ಕೆಲವು ಸೆಲ್‌ ಫೋನ್‌ ಗಳ ವಿಧಿವಿಜ್ಞಾನ ವಿಶ್ಲೇಷಣೆಯು ಭದ್ರತಾ ಉಲ್ಲಂಘನೆಯನ್ನು ದೃಢಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News