ಶಾಲೆಗೆ ಪ್ರವೇಶಿಸಲೆತ್ನಿಸಿದ ಪೊಲೀಸರ ಮೇಲೆ ಆರೆಸ್ಸೆಸ್‌ ಕಾರ್ಯಕರ್ತನಿಂದ ಹಲ್ಲೆ

Update: 2022-01-02 09:59 GMT

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನ ವಿಲಂಕುರಿಚಿಯಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಆರೆಸ್ಸೆಸ್‌ ಕಾರ್ಯಕರ್ತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳೀಯ ಶಾಲೆಯೊಂದರಲ್ಲಿ ಆರೆಸ್ಸೆಸ್‌ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದು, ಇದನ್ನು ವಿರೋಧಿಸಿ ನಾಮ್‌ ತಮಿಳರ್‌ ಕಚ್ಚಿ ಪಕ್ಷದ ಸದಸ್ಯರು ಶುಕ್ರವಾರ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಶಾಲೆಯ ಮುಂದೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಸ್ಥಳದಲ್ಲಿ ಕೊಯಮತ್ತೂರು ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಡಿಸಿಪಿ) ಟಿ ಜಯಚಂದ್ರನ್ ಸೇರಿದಂತೆ ಹಲವಾರು ಪೊಲೀಸ್ ಅಧಿಕಾರಿಗಳು ಶಾಲೆಯ ಆವರಣಕ್ಕೆ ಪ್ರವೇಶಿಸಲು ತಯಾರಾಗುತ್ತಿದ್ದಂತೆಯೇ ಆರೆಸ್ಸೆಸ್‌ ಕಾರ್ಯಕರ್ತರು ಅವರನ್ನು ತಡೆದಿದ್ದಾರೆ. ಜೊತೆಗೆ ಆರೆಸ್ಸೆಸ್‌ ಕಾರ್ಯಕರ್ತನೋರ್ವ ಪೊಲೀಸರನ್ನು ತಳ್ಳುತ್ತಿರುವ ವೀಡಿಯೋ ಕೂಡಾ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ.

ಪೊಲೀಸ್ ವರಿಷ್ಠಾಧಿಕಾರಿ ಟಿ ರಾಜ್‌ಕುಮಾರ್ ಅವರ ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರು ಆರೆಸ್ಸೆಸ್ ಸದಸ್ಯರು ಮತ್ತು ಹಿಂದೂ ಮುನ್ನನಿಯ ಉತ್ತರ ಜಿಲ್ಲಾ ಕಾರ್ಯದರ್ಶಿ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಕಾನೂನುಬಾಹಿರ ಸಭೆ ಮತ್ತು ಸಾರ್ವಜನಿಕ ಸೇವಕರ ಮೇಲೆ ಹಲ್ಲೆ ಪ್ರರಕಣವನ್ನು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News