×
Ad

ನಿಯಂತ್ರಕರ ಅನುಮತಿಯಿಲ್ಲದೆ ಹಾರಾಟ ಆರಂಭಿಸಿದ್ದ ಸ್ಪೈಸ್ ಜೆಟ್ ವಿಮಾನ: ಪೈಲಟ್‌ಗಳ ಅಮಾನತು

Update: 2022-01-02 18:23 IST

ಹೊಸದಿಲ್ಲಿ,ಜ.2: ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ವು ಡಿಸೆಂಬರ್ 30ರಂದು ಸ್ಪೈಸ್ ಜೆಟ್ ನ ಪ್ರಯಾಣಿಕ ವಿಮಾನವು ಗುಜರಾತಿನ ರಾಜಕೋಟ್‌ನಿಂದ ವಾಯು ಸಂಚಾರ ನಿಯಂತ್ರಕ (ಎಟಿಸಿ)ರ ಕಡ್ಡಾಯ ಅನುಮತಿಯನ್ನು ಪಡೆದುಕೊಳ್ಳದೆ ಹಾರಾಟವನ್ನು ಆರಂಭಿಸಿದ್ದ ಘಟನೆ ಕುರಿತು ತನಿಖೆಗೆ ಆದೇಶಿಸಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದರು.

 
ಡಿಜಿಸಿಎ ತನಿಖೆ ಬಾಕಿಯಿರುವಂತೆ ರಾಜಕೋಟ್-ದಿಲ್ಲಿ ವಿಮಾನದ ಪೈಲಟ್‌ಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಸ್ಪೈಸ್ ಜೆಟ್ ವಕ್ತಾರರು ತಿಳಿಸಿದರು.
ಡಿ.30ರಂದು ಬೆಳಿಗ್ಗೆ 9:30ರ ಸುಮಾರಿಗೆ ರಾಜಕೋಟ್‌ನಿಂದ ಪ್ರಯಾಣವನ್ನು ಆರಂಭಿಸಿದ್ದ ವಿಮಾನವು 11:15 ಗಂಟೆಗೆ ದಿಲ್ಲಿಯಲ್ಲಿ ಇಳಿದಿತ್ತು ಎಂದು ಅಧಿಕಾರಿಗಳು ಹೇಳಿದರು.

ವಿಮಾನವೊಂದು ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗುವ ಮುನ್ನ ಎಟಿಸಿಯಿಂದ ಹಲವಾರು ಅನುಮತಿಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಏರ್‌ಕ್ರಾಫ್ಟ್ ಸ್ಟಾಂಡ್‌ನಿಂದ ರನ್‌ವೇಗೆ ವಿಮಾನವನ್ನು ತರಲು,ಇಂಜಿನ್ ಅನ್ನು ಆರಂಭಿಸಲು,ಸರದಿಯಲ್ಲಿ ನಿಲ್ಲಲು ಅನುಮತಿಗಳನ್ನು ಪಡೆಯಬೇಕಾಗುತ್ತದೆ ಮತ್ತು ಅಂತಿಮ ಅನುಮತಿ ಲಭಿಸಿದ ನಂತರವೇ ಟೇಕ್ ಆಫ್ ಆಗಬೇಕಾಗುತ್ತದೆ.

 ಡಿ.30ರಂದು ರಾಜಕೋಟ್‌ನಿಂದ ಟೇಕ್ ಆಫ್ ಆಗುವ ಮುನ್ನ ಪೈಲಟ್‌ಗಳು ಅಗತ್ಯ ಅನುಮತಿಯನ್ನು ಪಡೆದಿರಲಿಲ್ಲ ಎಂದು ಬೆಟ್ಟು ಮಾಡಿದ ಅಧಿಕಾರಿಗಳು,ಈ ಘಟನೆಗೆ ಕಾರಣಗಳನ್ನು ತಿಳಿದುಕೊಳ್ಳಲು ಡಿಜಿಸಿಎ ತನಿಖೆಯನ್ನು ನಡೆಸುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News