ಹರಿದ್ವಾರದ ‘ಧರ್ಮ ಸಂಸದ್’ನಲ್ಲಿ ದ್ವೇಷ ಭಾಷಣ ಆರೋಪ: ತನಿಖೆ ನಡೆಸಲು ಐವರು ಸದಸ್ಯರ ವಿಶೇಷ ತನಿಖಾ ತಂಡ ರಚನೆ
ಹರಿದ್ವಾರ (ಉತ್ತರಾಖಂಡ), ಜ. 2: ಹರಿದ್ವಾರದಲ್ಲಿ ಆಯೋಜಿಸಲಾಗಿದ್ದ ‘ಧರ್ಮ ಸಂಸದ್’ ಸಂದರ್ಭ ಮಾಡಲಾದ ದ್ವೇಷ ಭಾಷಣ ಆರೋಪ ಪ್ರಕರಣದ ತನಿಖೆ ನಡೆಸಲು ಐವರು ಸದಸ್ಯರ ವಿಶೇಷ ತನಿಖಾ ತಂಡ (ಎಸ್ಐಟಿ)ವನ್ನು ರೂಪಿಸಲಾಗಿದೆ.
‘‘ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ನಲ್ಲಿ ದ್ವೇಷ ಭಾಷಣ ಮಾಡಿದ ಆರೋಪ ಪ್ರಕರಣದ ತನಿಖೆ ನಡೆಸಲು ಪೊಲೀಸ್ ಅಧೀಕ್ಷಕನ ಮಟ್ಟದ ಅಧಿಕಾರಿಯ ನೇತೃತ್ವದಲ್ಲಿ ಐವರು ಸದಸ್ಯರ ವಿಶೇಷ ತನಿಖಾ ತಂಡ (ಎಸ್ಐಟಿ)ವನ್ನು ರೂಪಿಸಲಾಗಿದೆ. ತಪ್ಪೆಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’’ ಎಂದು ಗರ್ವ್ಹಾಲ್ ನ ಸಹಾಯಕ ಇನ್ಸ್ಪೆಕ್ಟರ್ (ಡಿಐಜಿ) ಕರಣ್ ಸಿಂಗ್ ನಾಗ್ನ್ಯಾಲ್ ಅವರು ಹೇಳಿದ್ದಾರೆ.
ಈ ನಡುವೆ ದ್ವೇಷ ಭಾಷಣ ಆರೋಪದ ಪ್ರಕರಣಕ್ಕೆ ಸಂಬಂಧಿಸಿದ ಎಫ್ಐಆರ್ನಲ್ಲಿ ಹಿಂದೂ ಧಾರ್ಮಿಕ ನಾಯಕರಾದ ಯತಿ ನರಸಿಂಹಾನಂದ ಹಾಗೂ ಸಾಗರ್ ಸಿಂಧು ರಾಜ್ ಅವರ ಹೆಸರನ್ನು ಹರಿದ್ವಾರ ಪೊಲೀಸರು ಸೇರಿಸಿದ್ದಾರೆ. ‘‘ವೈರಲ್ ವೀಡಿಯೊ ತುಣುಕಿನ ಆಧಾರದಲ್ಲಿ ಧರ್ಮ ಸಂಸದ್ ದ್ವೇಷ ಭಾಷಣ ಆರೋಪದ ಎಫ್ಐಆರ್ನಲ್ಲಿ ಸಾಗರ್ ಸಿಂಧು ಮಹಾರಾಜ್ ಹಾಗೂ ಯತಿ ನರಸಿಂಹಾನಂದ ಗಿರಿ ಎಂಬಿಬ್ಬರ ಹೆಸರು ಸೇರಿಸಲಾಗಿದೆ. ತನಿಖೆ ಮುಂದುವರಿದಿದೆ. ಎಫ್ಐಆರ್ ಸೆಕ್ಷನ್ 295 ಎ ಒಳಗೊಂಡಿದೆ’’ ಎಂದು ಉತ್ತರಾಖಂಡದ ಪೊಲೀಸ್ ಮಹಾ ನಿರ್ದೇಶಕ ಅಶೋಕ್ ಕುಮಾರ್ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಧರ್ಮದಾಸ್, ಅನ್ನಪೂರ್ಣ, ವಾಸಿಂ ರಿಝ್ವಿ ಆಲಿಯಾಸ್ ಜಿತೇಂದ್ರ ತ್ಯಾಗಿ ಹಾಗೂ ಇತರರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಈ ಹಿಂದೆ ಪೊಲೀಸರು ತಿಳಿಸಿದ್ದರು.