×
Ad

ಲಖಿಂಪುರದಲ್ಲಿ ರೈತರ ಹತ್ಯೆಯ ವೇಳೆ ಸ್ಥಳದಲ್ಲಿದ್ದ ಕೇಂದ್ರ ಸಚಿವರ ಪುತ್ರ: ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

Update: 2022-01-03 20:23 IST
File Photo: PTI

ಲಕ್ನೋ: ಉತ್ತರ ಪ್ರದೇಶದ ಲಖಿಂಪುರದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಸ್ಥಳೀಯ ನ್ಯಾಯಾಲಯಕ್ಕೆ 5000 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದೆ. 

ನಾಲ್ವರು ರೈತರು ಹಾಗೂ ಓರ್ವ ಪತ್ರಕರ್ತ ಸೇರಿದಂತೆ ಒಟ್ಟು ಐವರ ಸಾವಿಗೆ ಕಾರಣವಾದ ಈ ಘಟನೆ ಸಂಧರ್ಭದಲ್ಲಿ ಕೇಂದ್ರದ ರಾಜ್ಯ ಗೃಹಸಚಿವ ಅಜಯ್‌ ಮಿಶ್ರಾ ಪುತ್ರ ಆಶಿಶ್‌ ಮಿಶ್ರಾ ಸ್ಥಳದಲ್ಲೇ ಇದ್ದರೆಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ ಎಂದು ndtv.com ವರದಿ ಮಾಡಿದೆ.

ಪ್ರತಿಭಟನಾಕಾರರ ಮೇಲೆ ಹರಿದ ಎಸ್‌ಯುವಿ ಒಳಗಡೆ ಆಶಿಶ್‌ ಮಿಶ್ರಾ ಇರುವುದನ್ನು ನೋಡಿದ ಸಾಕ್ಷಿಗಳಿವೆಯೆಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಬಿಜೆಪಿ ಮುಖಂಡರಿಗೆ ಹಿನ್ನೆಡೆಯಾಗಿದೆ. 

ಇದುವರೆಗೂ ಅಜಯ್‌ ಮಿಶ್ರಾ ತನ್ನ ಪುತ್ರ ಆಶಿಶ್‌ ಮಿಶ್ರಾ ಘಟನೆ ಸ್ಥಳದಲ್ಲಿ ಇರಲೇ ಇಲ್ಲವೆಂದು ಹಲವು ಬಾರಿ ಹೇಳಿದ್ದರು. 
ಅದಾಗ್ಯೂ, ಘಟನೆಯಲ್ಲಿ ಆಶಿಶ್‌ ಮಿಶ್ರಾ ಇರುವುದನ್ನು ಕಂಡ ಪ್ರತ್ಯಕ್ಷದರ್ಶಿಗಳಿದ್ದಾರೆ. ಇದು ಈ ಪ್ರಕರಣದ ಬಹು ಮುಖ್ಯ ಭಾಗ ಎಂದು ಹಿರಿಯ ವಿಚಾರಣಾ ಅಧಿಕಾರಿ ಎಸ್‌ಪಿ ಯಾದವ್‌ ತಿಳಿಸಿರುವುದಾಗಿ ndtv.com ವರದಿ ಮಾಡಿದೆ. 

ಸದ್ಯ ಕೇಂದ್ರ ಸಚಿವನ ಪುತ್ರ ಆಶಿಶ್‌ ಮಿಶ್ರಾ ನಾಲ್ವರು ರೈತರು ಹಾಗೂ ಓರ್ವ ಪತ್ರಕರ್ತನ ಕೊಲೆ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದು, ಪೊಲೀಸ್‌ ವಶದಲ್ಲಿದ್ದಾರೆ. 

ಪತ್ರಕರ್ತ ಹಾಗೂ ರೈತರ ಮೇಲೆ ಕಾರು ಹರಿಸಿದ ಬಳಿಕ ಉಂಟಾದ ಘರ್ಷಣೆಯಲ್ಲಿ ಬಿಜೆಪಿಯ ಇಬ್ಬರು ಕಾರ್ಯಕರ್ತರು ಸೇರಿದಂತೆ ಒಟ್ಟು ಎಂಟು ಮಂದಿ ಮೃತಪಟ್ಟಿದ್ದರು. 

ನರೇಂದ್ರ ಮೋದಿ ಸರ್ಕಾರ ತಂದಿದ್ದ ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನಾ ಸ್ಥಳಕ್ಕೆ ನುಗ್ಗಿ ಪ್ರತಿಭಟನಾಕಾರರ ಮೇಲೆ ಕಾರು ಹರಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಾದ್ಯಂತ ವೈರಲ್‌ ಆಗಿ, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News