ಕಾಳಿಚರಣ್ ಬಂಧನ ಖಂಡಿಸಿ ಪ್ರತಿಭಟನೆ: ಅಪರಿಚಿತ 50 ಮಂದಿ ವಿರುದ್ಧ ಪ್ರಕರಣ ದಾಖಲು
ಇಂಧೋರ್: ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕಾಳಿಚರಣ್ ಮಹಾರಾಜ್ ಬಂಧನ ಖಂಡಿಸಿ ನಡೆಸಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಅಪರಿಚಿತ 50 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿ ಪಿಟಿಐ ವರದಿ ಮಾಡಿದೆ.
ಕಳೆದ ತಿಂಗಳು ರಾಯಪುರದಲ್ಲಿ ನಡೆದ ಸಮಾವೇಶವೊಂದರಲ್ಲಿ ಗಾಂಧಿ ಹಂತಕ ನಾಥೂರಾಂ ಗೋಡ್ಸೆಯನ್ನು ಸಮರ್ಥಿಸಿ ಮಹಾತ್ಮ ಗಾಂಧೀಜಿಯನ್ನು ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 30 ರಂದು ಕಾಳಿಚರನ್‌ರನ್ನು ಬಂಧಿಸಲಾಗಿತ್ತು. ಕಾಳಿಚರಣ್ ಅವರ ಜಾಮೀನು ಅರ್ಜಿಯನ್ನು ಸೋಮವಾರ ರಾಯಪುರದ ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿತ್ತು.
ಇಂದೋರ್ ಜಿಲ್ಲಾಧಿಕಾರಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದಾಗ್ಯೂ, ಹಿಂದೂ ಮಹಾಸಭಾ, ಭಜರಂಗ ಸೇನಾ ಸೇರಿದಂತೆ ಸಾವಿರಾರು ಕಾರ್ಯಕರ್ತರು ಪೂರ್ವಾನುಮತಿಯಿಲ್ಲದೆ ಸೇರಿ ಕಾಳಿಚರಣ್ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.
ಸ್ಥಳೀಯಾಡಳಿತದ ಅನುಮತಿಯಿಲ್ಲದೆ ಅನಧಿಕೃತವಾಗಿ ಸೇರಿ, ಘೋಷಣೆ ಕೂಗಿದ ಘಟನೆಗೆ ಸಂಬಂಧಿಸಿದಂತೆ 50 ಮಂದಿ ಅಪರಿಚಿತರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಇಂದೋರ್‌ನ ಛೋತಿ ಗ್ವಾತೊಲಿ ಪೊಲೀಸ್ ಠಾಣೆಯ ಅಧಿಕಾರಿ ಸವಿತಾ ಛೌಧರಿ ತಿಳಿಸಿದ್ದಾರೆ.
ಜನರನ್ನು ಸೇರಿಸದಂತೆ, ಮೆರವಣಿಗೆ ನಡೆಸದಂತೆ ಜಿಲ್ಲಾಧಿಕಾರಿಯ ಆದೇಶವಿದ್ದಾಗ್ಯೂ ಹಲವಾರು ಮಂದಿ ಪ್ರತಿಭಟನೆ ನಡೆಸಿ ಆದೇಶ ಉಲ್ಲಂಘನೆ ಮಾಡಿರುವುದಾಗಿ ಛೌಧರಿ ತಿಳಿಸಿದ್ದಾರೆ.
ಪ್ರತಿಭಟನಾಕಾರರು ಕಾಳಿಚರಣ್ ಹೇಳಿಕೆಯನ್ನು ಸಮರ್ಥಿಸಿ ಗೋಡ್ಸೆ ಪರವಾಗಿ ಘೋಷಣೆ ಕೂಗಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದ್ದವು.