ಇಥಿಯೋಪಿಯಾದ ಬಂಧನ ಕೇಂದ್ರದಲ್ಲಿ ಸಾವಿರಾರು ಟಿಗ್ರೆ ಮೂಲನಿವಾಸಿಗಳು: ಮಾನವ ಹಕ್ಕು ನಿಗಾ ಸಮಿತಿ ವರದಿ‌

Update: 2022-01-05 15:53 GMT
ಸಾಂದರ್ಭಿಕ ಚಿತ್ರ:PTI

ನ್ಯೂಯಾರ್ಕ್, ಜ.5: ಸೌದಿ ಅರೆಬಿಯಾದಿಂದ ವಾಪಸು ಕಳುಹಿಸಲಾದ ಸಾವಿರಾರು ಟಿಗ್ರೆ ಮೂಲನಿವಾಸಿಗಳನ್ನು ಇಥಿಯೋಪಿಯಾದಲ್ಲಿ ಬಲವಂತವಾಗಿ ಬಂಧನ ಕೇಂದ್ರದಲ್ಲಿ ಇಡಲಾಗಿದೆ ಅಥವಾ ಕಣ್ಮರೆ ಮಾಡಲಾಗಿದೆ ಎಂದು ಮಾನವಹಕ್ಕು ನಿಗಾ ಸಮಿತಿ (ಎಚ್‌ಆರ್‌ಡಬ್ಲ್ಯೂ) ವರದಿ ಮಾಡಿದೆ.

ಇಥಿಯೋಪಿಯಾದ ಫೆಡರಲ್ ಸರಕಾರದ ಪಡೆ ಹಾಗೂ ಉತ್ತರದ ಟಿಗ್ರೆ ವಲಯದ ಹೋರಾಟಗಾರರ ಮಧ್ಯೆ ಟಿಗ್ರೆ ವಲಯದಲ್ಲಿ 202ರ ನವೆಂಬರ್ ನಲ್ಲಿ ಭುಗಿಲೆದ್ದ ಕ್ರೂರ ಸಂಘರ್ಷದ ಬಳಿಕ ಈ ಬೆಳವಣಿಗೆ ನಡೆದಿದೆ. ಈ ಸಂಘರ್ಷದಲ್ಲಿ ಸಾವಿರಾರು ಮಂದಿ ಸಾವಿಗೀಡಾಗಿದ್ದು ಈ ಪ್ರದೇಶದಲ್ಲಿ ವ್ಯಾಪಕ ಮಾನವೀಯ ಬಿಕ್ಕಟ್ಟಿನ ಪರಿಸ್ಥಿತಿ ನೆಲೆಸಿದೆ ಎಂದು ಎಚ್‌ಆರ್‌ಡಬ್ಲ್ಯೂ ವರದಿ ಮಾಡಿದೆ. ಈ ಪ್ರದೇಶದಲ್ಲಿ ನವೆಂಬರ್‌ನಿಂದ 6 ತಿಂಗಳ ಅವಧಿಯ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ.

ಕಳೆದ ಕೆಲ ವರ್ಷಗಳಿಂದ ಉದ್ಯೋಗ ಅರಸಿ ಸೌದಿ ಅರೆಬಿಯಾಕ್ಕೆ ತೆರಳಿದ್ದ ಸಾವಿರಾರು ಇಥಿಯೋಪಿಯನ್ನರನ್ನು ಸೌದಿ ಅರೆಬಿಯಾ ವಾಪಾಸು ಕಳುಹಿಸಿದ್ದು ಅವರಲ್ಲಿ ಟಿಗ್ರೆಯನ್ನರನ್ನು ಪ್ರತ್ಯೇಕಿಸಿ ಇಥಿಯೋಪಿಯಾದ ರಾಜಧಾನಿ ಅಥವಾ ಇತರೆಡೆ ಅವರ ಇಚ್ಛೆಗೆ ವಿರುದ್ಧವಾಗಿ ಬಲವಂತದಿಂದ ಕೂಡಿ ಹಾಕಲಾಗಿದೆ. ಇತರರನ್ನು ಇಥಿಯೋಪಿಯಾದ ಉತ್ತರದಲ್ಲಿರುವ ಟಿಗ್ರೆಗೆ ಹಿಂದಿರುಗಲು ಅವಕಾಶ ನಿರಾಕರಿಸಲಾಗಿದೆ. ರಸ್ತೆಬದಿಯ ತಪಾಸಣಾ ಕೇಂದ್ರ ಅಥವಾ ವಿಮಾನ ನಿಲ್ದಾಣದ ತಪಾಸಣಾ ಕೇಂದ್ರದಲ್ಲಿ ಟಿಗ್ರೆಯನ್ನರನ್ನು ಗುರುತಿಸಿ ಅವರನ್ನು ಬಂಧನ ಕೇಂದ್ರಕ್ಕೆ ವರ್ಗಾಯಿಸಲಾಗುತ್ತಿದೆ ಎಂದು ಮಾನವಹಕ್ಕು ನಿಗಾ ಸಮಿತಿ ವರದಿ ಮಾಡಿದೆ.

ಸೌದಿ ಅರೆಬಿಯಾದಿಂದ ಗಡೀಪಾರು ಮಾಡಲಾಗಿರುವ ಟಿಗ್ರೆಯನ್ನರನ್ನು ಅಕ್ರಮ ಬಂಧನದಲ್ಲಿರಿಸಿ ಇಥಿಯೋಪಿಯಾದ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಮತ್ತು ಬಲವಂತದಿಂದ ಅವರನ್ನು ಕಣ್ಮರೆ ಮಾಡುತ್ತಿದ್ದಾರೆ ಎಂದು ಮಾನವ ಹಕ್ಕು ನಿಗಾ ಸಮಿತಿಯ ವಲಸಿಗರು ಮತ್ತು ನಿರಾಶ್ರಿತರ ಹಕ್ಕುಗಳ ಅಧಿಕಾರಿ ನಾಡಿಯಾ ಹಾರ್ಡ್‌ಮನ್ ಹೇಳಿದ್ದಾರೆ.

ಜನಾಂಗೀಯತೆಯ ಆಧಾರದಲ್ಲಿ ಟಿಗ್ರೆಯನ್ನರನ್ನು ಹೊರಹಾಕಲಾಗಿದೆ ಎಂಬ ವರದಿಯನ್ನು ಇಥಿಯೋಪಿಯಾ ಸರಕಾರ ನಿರಾಕರಿಸಿದ್ದು ಟಿಗ್ರೆ ಪಡೆಗೆ ನೆರವಾಗುತ್ತಿರುವ ಶಂಕಿತ ವ್ಯಕ್ತಿಗಳನ್ನು ಮಾತ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದಿದೆ. ಈ ಕಾರ್ಯಾಚರಣೆಯಲ್ಲಿ ಸಾವಿರಾರು ಮಂದಿ ಸಿಕ್ಕಿಬಿದ್ದಿದ್ದಾರೆ ಎಂದು ಇಥಿಯೋಪಿಯಾದ ಸರಕಾರಕ್ಕೆ ಸಂಯೋಜಿತವಾಗಿರುವ ಮಾನವ ಹಕ್ಕು ನಿಗಾ ಸಮಿತಿ ಅಂದಾಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News