ಡಿಸೆಂಬರ್ ನಲ್ಲಿ ಸೇವಾವಲಯದ ಚಟುವಟಿಕೆಗಳು ಮೂರು ತಿಂಗಳುಗಳಲ್ಲೇ ಕನಿಷ್ಠ ಮಟ್ಟಕ್ಕೆ: ಸಮೀಕ್ಷಾ ವರದಿ
ಹೊಸದಿಲ್ಲಿ,ಜ.5: ಕೋವಿಡ್ 19 ಮೂರನೆ ಅಲೆಯ ಕುರಿತ ಆತಂಕದಿಂದಾಗಿ 2021ರ ಡಿಸೆಂಬರ್ ನಲ್ಲಿ ಭಾರತದ ಸೇವಾವಲಯದ ಚಟುವಟಿಕೆಗಳು ಮೂರು ತಿಂಗಳುಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದ್ದವು ಎಂದು ವಾಣಿಜ್ಯ ವಿಶ್ಲೇಷಣಾ ಸಂಸ್ಥೆ ಐಎಚ್ಎಸ್ ಮಾರ್ಕ್ಇಟ್ ಇಂಡಿಯಾದ ಸಮೀಕ್ಷಾ ವರದಿಯು ತಿಳಿಸಿದೆ.
2021ರ ನವೆಂಬರ್ ನಲ್ಲಿ 58.1ರಷ್ಟಿದ್ದ ಮಾಸಿಕ ಖರೀದಿ ನಿರ್ವಹಣೆ (ಪಿಎಂಐ)ಯ ಸೂಚ್ಯಂಕವು ಡಿಸೆಂಬರ್ ನಲ್ಲಿ 55.5ಕ್ಕೆ ಕುಸಿದಿತ್ತು. ಅಕ್ಟೋಬರ್ ನಲ್ಲಿ ಪಿಎಂಐ 58.4 ಆಗಿತ್ತು. ಕೋವಿಡ್ ಹಾವಳಿಯ ಆತಂಕದಿಂದಾಗಿ ಪ್ರಯಾಣ ಮತ್ತಿತರ ಚಟುವಟಿಕೆಗಳಿಗೆ ನಿರ್ಬಂಧ ಹೇರಿಕೆಯಿಂದಾಗಿ ವಿದೇಶಿ ಮೂಲದ ಉದ್ಯಮಗಳೂ ಚೇತರಿಕೆಯನ್ನು ಕಂಡಿಲ್ಲವೆಂದು ವರದಿ ತಿಳಿಸಿದೆ.
ಸೇವಾ ವಲಯದ ಉದ್ಯಮಿಗಳಿಗೆ 2021 ಇನ್ನೊಂದು ಕಠಿಣ ವರ್ಷವಾಗಿ ಪರಿಣಮಿಸಿತು ಎಂದು ಐಎಚ್ಎಸ್ ಮಾರ್ಕ್ ಇಟ್ ಸಂಸ್ಥೆಯ ಆರ್ಥಿಕ ಸಹ ನಿರ್ದೇಶಕ ಪಾಲಿಯನ್ನಾ ಡಿ ಲಿಮಾ ತಿಳಿಸಿದ್ದಾರೆ.
ಉದ್ಯೋಗ ವಲಯದಲ್ಲಿಯೂ ನವೆಂಬರ್ ತಿಂಗಳ ಅಂಕಿಅಂಶಗಳಿಗೆ ಹೋಲಿಸಿದರೆ ಡಿಸೆಂಬರ್ ನಲ್ಲಿ ಉದ್ಯೋಗ ಕಳಕೊಂಡವರ ಸಂಖ್ಯೆಯಲ್ಲಿ ತುಸು ಅಧಿಕವಾಗಿರುವುದು ಕಂಡುಬಂದಿದೆ. ಆದಾಗ್ಯೂ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.96ರಷ್ಟು ಕಂಪೆನಿಗಳಲ್ಲಿ ವೇತನ ಶ್ರೇಣಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲವೆಂದು ಸಮೀಕ್ಷೆ ತಿಳಿಸಿದೆ.