ಪ್ರಧಾನಿ ಬರುವುದಾಗಿ ಸುಳ್ಳು ಹೇಳಿ ಎಸ್‌ಪಿ ನಮ್ಮನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದುಕೊಂಡಿದ್ದೆವು: ರೈತ ಮುಖಂಡ

Update: 2022-01-06 12:35 GMT

ಹೊಸದಿಲ್ಲಿ: ಪ್ರಧಾನಮಂತ್ರಿ ರಸ್ತೆಯ ಮೂಲಕ ಚುನಾವಣಾ ರ್ಯಾಲಿಗೆ ತೆರಳುತ್ತಿದ್ದಾರೆ. ಪ್ರತಿಭಟನೆ ಸ್ಥಗಿತಗೊಳಿಸಿ ರಸ್ತೆಯನ್ನು ತೆರವುಗೊಳಿಸುವಂತೆ ಫಿರೋಝಾಬಾದ್‌ ಹಿರಿಯ ಎಸ್‌ಪಿ ತಮ್ಮನ್ನು ಕೇಳಿರುವುದಾಗಿ ಭಾರತೀಯ ಕಿಸಾನ್‌ ಯೂನಿಯನ್‌ (ಕ್ರಾಂತಿಕಾರಿ) ಮುಖ್ಯಸ್ಥ ಸುರ್ಜಿತ್‌ ಸಿಂಗ್‌ ಫೂಲ್‌ ಒಪ್ಪಿಕೊಂಡಿದ್ದಾರೆ.

"ಪ್ರಧಾನಿ ಆ ಮಾರ್ಗದ ಮೂಲಕ ಬರುವುದಾಗಿ ಎಸ್‌ಪಿ ನಮಗೆ ತಿಳಿಸಿದ್ದರು. ಆದರೆ, ನಮ್ಮ ಪ್ರತಿಭಟನೆಯನ್ನು ತೆರವುಗೊಳಿಸಲು ಪೊಲೀಸರು ಮಾಡುತ್ತಿರುವ ನಾಟಕ ಎಂದು ನಾವು ಭಾವಿಸಿದ್ದೆವು. ಹಾಗಾಗಿ, ರಸ್ತೆಯನ್ನು ಬಿಟ್ಟು ಕೊಟ್ಟಿರಲಿಲ್ಲ" ಎಂದು ಸುರ್ಜಿತ್‌ ಸಿಂಗ್‌ ತಿಳಿಸಿದ್ದಾರೆ. 

ಪಂಜಾಬಿನ ಫಿರೋಝ್‌ಪುರ್‌ಗೆ ಪ್ರಧಾನಿ ಭೇಟಿಯು ಭದ್ರತಾ ಲೋಪದ ಆರೋಪದ ಮೇರೆಗೆ ಸ್ಥಗಿತಗೊಂಡಿತ್ತು. ಪ್ರತಿಭಟನೆಕಾರರಿಂದಾಗಿ ಪ್ರಧಾನಿ ಮೋದಿಯವರು ಕನಿಷ್ಟ  15 ನಿಮಿಷ ಫ್ಲೈ ಓವರ್‌ ಮೇಲೆ ಸಿಲುಕಿಕೊಳ್ಳಬೇಕಾಯಿತು ಎಂದು ಕೇಂದ್ರ ಗೃಹ ವ್ಯವಹಾರದ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಘಟನೆಯನ್ನು ಗಂಭೀರ ಭದ್ರತಾ ಲೋಪವೆಂದು ಪರಿಗಣಿಸಿರುವ ಗೃಹ ಸಚಿವಾಲಯ ಪ್ರಕರಣ ಕುರಿತಂತೆ ಸಂಪೂರ್ಣ ವರದಿ ನೀಡುವಂತೆ ಪಂಜಾಬ್‌ ಸರ್ಕಾರಕ್ಕೆ ನಿರ್ದೇಶಿಸಿದೆ.

ಪ್ರಧಾನಿ ಭೇಟಿಯು ಮಾರ್ಗ ಮಧ್ಯೆಯೇ ಮೊಟಕುಗೊಂಡಿರುವುದ ರಾಜಕೀಯ ಬೆಳವಣಿಗೆಗಳಿಗೆ ಕಾರಣವಾಗಿದ್ದು, ಈ ಕುರಿತಂತೆ ಬಿಜೆಪಿ ಕಾಂಗ್ರೆಸ್‌ ವಿರುದ್ಧ ಸತತ ಆರೋಪ ಹೊರಿಸುತ್ತಿದೆ. ಪ್ರಧಾನಿ ಮೋದಿಯವರ ಕಾರ್ಯಕ್ರಮಗಳನ್ನು ಹಾಳುಗೆಡವಲು ಕಾಂಗ್ರೆಸ್‌ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. 
ಈ ನಡುವೆ ಪಂಜಾಬ್‌ ಸಿಎಂ ಚರಣ್ ಜಿತ್‌ ಸಿಂಗ್‌ ಚನ್ನಿಯು ಭದ್ರತಾ ಲೋಪದ ಆರೋಪವನ್ನು ನಿರಾಕರಿಸಿದ್ದು, ಪ್ರಧಾನಿ ಆ ಮಾರ್ಗವಾಗಿ ಬರುವ ಮಾಹಿತಿ ನಮಗಿರಲಿಲ್ಲ ಎಂದಿದ್ದಾರೆ. 

ಕೊನೆ ಕ್ಷಣದಲ್ಲಿ ನಮಗೆ ಮಾಹಿತಿ ಬಂದಿತ್ತಾದರೂ ಪ್ರತಿಕೂಲ ಹವಾಮಾನ ಹಾಗೂ ಪ್ರತಿಭಟನೆಯ ಕಾರಣ ನೀಡಿ ಮಾರ್ಗ ಬದಲಿಸುವಂತೆ ನಾವು ಕೇಳಿಕೊಂಡಿದ್ದೆವು. ಆದರೂ ಅಲ್ಲಿ ಯಾವುದೇ ಭದ್ರತಾ ಲೋಪ ಉಂಟಾಗಲಿಲ್ಲ ಎಂದು ಚನ್ನಿ ತಿಳಿಸಿದ್ದಾರೆ. 

ಈ ನಡುವೆ ಪಂಜಾಬ್‌ ಸಿಎಂ ಅಮರೀಂದರ್‌ ಸಿಂಗ್‌ ಕೂಡಾ ಆರೋಪ-ಪ್ರತ್ಯಾರೋಪಗಳ ಕಣಕ್ಕಿಳಿದಿದ್ದು, ಹಾಲಿ ಸಿಎಂ ಚನ್ನಿ ಅವರನ್ನು ರಾಜಿನಾಮೆ ನೀಡುವಂತೆ ಆಗ್ರಹಿಸಿದ್ದಾರ. ಪಾಕಿಸ್ತಾನದ ಗಡಿ ಭಾಗದಿಂದ ಕೇವಲ 10 ಕಿಮೀ ಇರುವ ಪ್ರದೇಶದಲ್ಲೂ ಪ್ರಧಾನಮಂತ್ರಿಗೆ ಸರಾಗ ಸಂಚಾರವನ್ನು ಅನುವು ಮಾಡಿಕೊಡಲು ಪಂಜಾಬ್‌ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸಿಎಂ ರಾಜಿನಾಮೆ ನೀಡುವುದೇ ಒಳ್ಳೆಯದು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News