×
Ad

ದ್ವೇಷ ಹರಡಲು ಸ್ವಯಂಚಾಲಿತ ತಂತ್ರಜ್ಞಾನದ ಬಳಕೆ: ಬಿಜೆಪಿ ಐಟಿ ಸೆಲ್ ಕಾರ್ಯವೈಖರಿ ಬಗ್ಗೆ ʼದಿ ವೈರ್ʼ ತನಿಖಾ ವರದಿ

Update: 2022-01-06 19:24 IST

ಹೊಸದಿಲ್ಲಿ: ದ್ವೇಷವನ್ನು ವ್ಯವಸ್ಥಿತವಾಗಿ ಹರಡಲು ಬಿಜೆಪಿ ತನ್ನದೇ ಆದ ಅಪ್ಲಿಕೇಶನ್ ಒಂದನ್ನು ಅಭಿವೃದ್ಧಿ ಪಡಿಸಿಕೊಂಡಿದೆ. ಆ ಅಪ್ಲಿಕೇಶನ್ ಮೂಲಕ ರಾಜಕೀಯ ವೈರಿಗಳನ್ನು ಟೀಕಿಸಲು, ತನ್ನ ವಿಮರ್ಶಕರಿಗೆ ಕಿರುಕುಳ ನೀಡಲು ಬಳಸಿಕೊಳ್ಳಲಾಗುತ್ತದೆ ಎಂಬ ಅಂಶವನ್ನು TheWire.in ತನಿಖಾ ವರದಿ ಬಹಿರಂಗಪಡಿಸಿದೆ. ಈ ವರದಿಯನ್ನು ಆಯುಷ್ಮಾನ್‌ ಕೌಲ್‌ ಹಾಗೂ ದೇವೇಶ್‌ ಕುಮಾರ್‌ ಸಿದ್ಧಪಡಿಸಿದ್ದಾರೆ. 

2020ರ ಎಪ್ರಿಲ್‌ನಲ್ಲಿ ಬಿಜೆಪಿ ಐಟಿಸೆಲ್ ಉದ್ಯೋಗಿ ಎಂದು ಹೇಳಿಕೊಂಡ ಆರತಿ ಶರ್ಮಾ ಎಂಬವರು ಬಿಜೆಪಿ ಐಟಿ ಸೆಲ್ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕುವ ಸರಣಿ ಟ್ವೀಟ್ ಮಾಡಿದ್ದರು. ಅದರಲ್ಲಿ ಬಿಜೆಪಿ ಐಟಿ ಸೆಲ್ ಅಭಿವೃದ್ಧಿ ಪಡಿಸಿದ ಟೆಕ್ ಫಾಗ್ (Tek Fog) ಎಂಬ ಅಪ್ಲಿಕೇಶನ್ ಕುರಿತು ಅವರು ಉಲ್ಲೇಖಿಸಿದ್ದರು. ಈ ಜಾಡು ಹಿಡಿದು ಹೋದ ದಿ.ವೈರ್ ಹಲವು ಆಘಾತಕಾರಿ ಅಂಶವನ್ನು ಹೊರಗೆಡವಿದೆ. 

ಟೆಕ್ ಫಾಗ್ ಅಪ್ಲಿಕೇಶನ್ ಮೂಲಕ ಆಡಳಿತ ರೂಢ ಬಿಜೆಪಿಯ ವೈರಿ ರಾಜಕೀಯ ಪಕ್ಷಗಳನ್ನು ವಿಮರ್ಶಿಸಲು, ಸರ್ಕಾರದ ವಿರುದ್ಧದ ವಿಮರ್ಶಕರನ್ನು ವ್ಯಕ್ತಿಗತ ಟ್ರಾಲ್ ಮಾಡಲು ಸ್ವಯಂಚಾಲಿತ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಟ್ವೀಟ್ ಸರಣಿಯಲ್ಲಿ ಹೇಳಲಾಗಿತ್ತು. 

ಈ ಟ್ವಿಟರ್ ಖಾತೆಯನ್ನು ಸಂಪರ್ಕಿಸಿರುವ ದಿ ವೈರ್ ತಂಡಕ್ಕೆ ಅಪ್ಲಿಕೇಶನ್ ನಿರ್ವಹಿಸುವ ರಹಸ್ಯ ಕೆಲಸಗಳ ಕುರಿತು ಮಾಹಿತಿ ದೊರೆತಿದ್ದು, ಬಿಜೆಪಿ ಪರವಾಗಿರುವ ವಾಟ್ಸಪ್ ಗುಂಪುಗಳನ್ನು ರಚಿಸುವುದು, ಐಟಿ ಸೆಲ್ ಉದ್ಯೋಗಿಗಳಿಗೆ ಟ್ರೆಂಡಿಂಗ್‌ನಲ್ಲಿರುವ ಹ್ಯಾಷ್‌ಟ್ಯಾಗ್‌ಗಳನ್ನು ರಚಿಸಿಕೊಡುವುದು, ವಿರೋಧಿಗಳನ್ನು ಗುರಿಮಾಡಿಸಲು ವಿಷಯಗಳನ್ನು ಕೊಡುವುದು ಮೊದಲಾದ ಹಲವು ಕೆಲಸವನ್ನು ಟೆಕ್ ಫಾಗ್ ಆಪ್ ಮೂಲಕ ನಿರ್ವಹಿಸಲಾಗುತ್ತಿತ್ತು ಎನ್ನಲಾಗಿದೆ. 

ಬಿಜೆಪಿ ಐಟಿ ಸೆಲ್ ಉದ್ಯೋಗಿಗಳಿಗೆ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲ್ಲಲು ಸಾಧ್ಯವಾದರೆ ಸರ್ಕಾರಿ ಉದ್ಯೋಗ ನೀಡುವುದಾಗಿ ಆಮಿಷಗಳನ್ನು ನೀಡಲಾಗಿತ್ತು ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ಬಿಜೆಪಿ ಐಟಿ ಸೆಲ್ ಉದ್ಯೋಗಿಗಳಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲವಾಗಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದರು. 

ಈ ಆರೋಪಗಳನ್ನು ಪರಿಶೀಲಿಸಲು ವೈರ್ ತಂಡವು ಕಳೆದ ಎರಡು ವರ್ಷಗಳ ಕಾಲ ತನಿಖೆ ಕೈಗೊಂಡಿದ್ದು, ಅಪ್ಲಿಕೇಶನ್ ಗೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ಸಂಗ್ರಹಿಸಿದೆ. ಹಾಗೂ ಮೇಲೆ ಹೇಳಿದ ಉದ್ಯೋಗಿಗೂ ಐಟಿ ಸೆಲ್ ಗೂ ಇರುವ ಸಂಬಂಧವನ್ನು ಕೂಡಾ ಪರಿಶೀಲಿಸಿದ್ದು, ಪ್ಲೇ ಸ್ಲಿಪ್ ಗಳನ್ನು, ಈಮೇಲ್ ಗಳನ್ನು ಪರಿಶೀಲಿಸಿದೆ. ಅದಕ್ಕೆ ಸಂಬಂಧಪಟ್ಟ ಹಲವು ಸ್ಕ್ರೀನ್ ಶಾಟ್ ಗಳು ವೈರ್ ತಂಡಕ್ಕೆ ದೊರೆತಿದ್ದು, ಷರತ್ತಿನ ಮೇರೆಗೆ ಈ ಗೌಪ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಹೊರ ಹಾಕಿಲ್ಲ ಎಂದು ವೈರ್ ವರದಿ ಹೇಳಿದೆ. 

ತನಗೆ ಲಭಿಸಿರುವ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿ ವಿಶ್ಲೇಷಿಸಿರುವ ವೈರ್, ಭಾರತದಲ್ಲಿ ಪಕ್ಷಾಪಾತದಿಂದ ಮಾಹಿತಿ ಹಂಚಲು ಈ ಅಪ್ಲಿಕೇಶನ್ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಬಹಿರಂಗಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News