ಪ್ಯಾಂಗಾಂಗ್ ನ ಅತಿಕ್ರಮಿತ ಪ್ರದೇಶದಲ್ಲಿ ಚೀನಾದಿಂದ ಸೇತುವೆ ನಿರ್ಮಾಣ: ವಿದೇಶಾಂಗ ಸಚಿವಾಲಯದ ಖಂಡನೆ

Update: 2022-01-06 17:27 GMT
ಉಪಗ್ರಹ ಚಿತ್ರ(photo:twitter/@detresfa_)

ಹೊಸದಿಲ್ಲಿ,ಜ.6: ಪೂರ್ವ ಲಡಾಖ್‌ನ ಪ್ಯಾಂಗಾಂಗ್ ಸರೋವರಕ್ಕೆ ಚೀನಾ ಸೇತುವೆ ನಿರ್ಮಿಸುತ್ತಿರುವುದನ್ನು ಭಾರತ ಗುರುವಾರ ಬಲವಾಗಿ ಖಂಡಿಸಿದೆ. ಚೀನಾವು ಕಳೆದ 60 ವರ್ಷಗಳಿಂದ ಅದು ಅಕ್ರಮವಾಗಿ ಸ್ವಾಧೀನದಲ್ಲಿಟ್ಟುಕೊಂಡಿರುವ ಪ್ರದೇಶದಲ್ಲಿ ಈ ಸೇತುವೆಯನ್ನು ನಿರ್ಮಿಸುತ್ತಿದೆಯೆಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆಕ್ರೋಶ ವ್ಯಕ್ತಪಡಿಸಿದೆ.

‘‘ಪ್ಯಾಂಗಾಂಗ್ ಸರೋವರದ ಚೀನಾ ಭಾಗದಿಂದ ಸೇತುವೆಯ ನಿರ್ಮಾಣಗೊಳ್ಳುತ್ತಿರುವುದರ ಬಗ್ಗೆ ಕೇಂದ್ರ ಸರಕಾರವು ನಿಕಟವಾದ ನಿಗಾವಿರಿಸಿದೆ. 60 ವರ್ಷಗಳಿಂದ ಚೀನಾದ ಅಕ್ರಮ ಸ್ವಾಧೀನದಲ್ಲಿರುವ ಪ್ರದೇಶಗಳಲ್ಲಿ ಈ ಸೇತುವೆಯನ್ನು ನಿರ್ಮಾಣವಾಗುತ್ತಿದೆ’’ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಆರಿಂಮ್ ಭಾಗ್‌ಚಿ  ಗುರುವಾರ ಹೊಸದಿಲ್ಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘‘ ನಿಮಗೆ ತಿಳಿದಿರುವಂತೆ ಭಾರತವು ಚೀನಾದ ಈ ಕಾನೂನುಬಾಹಿರ ಅತಿಕ್ರಮಣವನ್ನು ಯಾವತ್ತೂ ಒಪ್ಪಿಕೊಂಡಿಲ್ಲ ಹಾಗೂ ನಮ್ಮ ದೇಶದ ಭದ್ರತಾ ಹಿತಾಸಕ್ತಿಗಳು ಸಂಪೂರ್ಣವಾಗಿ ಸುರಕ್ಷಿತವಾಗಿರುವುದನ್ನು ಖಾತರಿಪಡಿಸಲು ಕೇಂದ್ರ ಸರಕಾರವು ಅಗತ್ಯವಿರುವ ಎಲ್ಲ ಹೆಜ್ಜೆಗಳನ್ನು ಇಡಲಿದೆ’’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಭಾರತೀಯ ಸಶಸ್ತ್ರ ಪಡೆಗಳಿಗೆ ಉತ್ತಮವಾದ ವ್ಯೂಹಾತ್ಮಕ ಬೆಂಬಲವನ್ನು ಒದಗಿಸುವುದಾಗಿ ಗಡಿ ಮೂಲ ಸೌಕರ್ಯ (ರಸ್ತೆಗಳು ಹಾಗೂ ಸೇತುವೆಗಳು) ಅಭಿವೃದ್ಧಿಗಾಗಿ ನೀಡಲಾಗುವ ಹಣಕಾಸು ನೆರವಿನಲ್ಲಿ ಗಣನೀಯ ಏರಿಕೆ ಮಾಡಲಾಗುವುದೆಂದು ಭಾಗ್‌ಚಿ  ತಿಳಿಸಿದರು.

ಚೀನಾವು ಪೂರ್ವ ಲಡಾಖ್‌ನ ಪ್ಯಾಂಗೊಂಗ್ ಸರೋವರಕ್ಕೆ ಸೇತುವೆ ನಿರ್ಮಿಸುತ್ತಿರುವುದನ್ನು ಸೂಚಿಸುವ ಉಪಗ್ರಹ ಚಿತ್ರಗಳು ಭೌಗೋಳಿಕ-ಬೇಹುಗಾರಿಕಾ ತಜ್ಞ ಡ್ಯಾಮಿಯೆನ್ ಸೈಮೊನ್ ಅವರಿಗೆ ಲಭ್ಯವಾಗಿರುವುದಾಗಿ ಎನ್‌ಡಿಟಿವಿ ಸುದ್ದಿವಾಹಿನಿಯು ಸೋಮವಾರ ವರದಿ ಮಾಡಿತ್ತು.

ದೇಶಭ್ರಷ್ಟ ಟಿಬೆಟ್ ಸಂಸತ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಲವಾರು ಭಾರತೀಯ ಸಂಸದರಿಗೆ ಚೀನಾದ ರಾಯಭಾರಿ ಕಚೇರಿಯು ಬರೆದಿರುವ ಪತ್ರದಲ್ಲಿ ಬಳಸಲಾದ ಧ್ವನಿಯು ಅಸ್ವೀಕಾರಾರ್ಹವೆಂದು ಹೇಳಿದರು. ಅರುಣಾಚಲ ಪ್ರದೇಶದ ಕೆಲವು ಭಾಗಗಳಿಗೆ ಚೀನಾವು ಮರುನಾಮಕರಣ ಮಾಡಿರುವುದನ್ನೂ ಬಗಾಚಿ ಖಂಡಿಸಿದರು. ಪೂರ್ವ ಲಡಾಖ್‌ನ ಗಡಿ ವಿವಾದವನ್ನು ಚೀನಾವು ಭಾರತದೊಂದಿಗೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದವರು ಹೇಳಿದರು.

ಕಳೆದ ವಾರದ ಚೀನಾ ರಾಯಭಾರಿ ಕಚೇರಿಯು ಟಿಬೆಟ್‌ಗಾಗಿನ ಸರ್ವಪಕ್ಷ ಭಾರತೀಯ ಸಂಸದೀಯ ವೇದಿಕೆಯ ಕೆಲವು ಸಂಸದರಿಗೆ ಪತ್ರ ಬರೆದು ದೇಶಭ್ರಷ್ಟ ಟಿಬೆಟ್ ಸಂಸತ್ ಆಯೋಜಿಸಿದ ಸತ್ಕಾರಕೂಟದಲ್ಲಿ ಅವರು ಭಾಗವಹಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು ಹಾಗೂ ಟಿಬೆಟಿಯನ್ ಶಕ್ತಿಗಳನ್ನು ಬೆಂಬಲಿಸಬಾರದೆಂದು ಆಗ್ರಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News