×
Ad

ಶಬರಿಮಲೆ ಪ್ರವೇಶಿಸಿದ ಮೊದಲ ದಲಿತ ಕಾರ್ಯಕರ್ತೆ ಮೇಲೆ ಹಲ್ಲೆ: ದಾಳಿ ಹಿಂದೆ ಆರೆಸ್ಸೆಸ್ ಕೈವಾಡದ ಆರೋಪ

Update: 2022-01-06 23:31 IST
G Sreedathan/ Twitter

ತಿರುವನಂತಪುರಂ: ಹೋರಾಗಾರ್ತಿ, ದಲಿತ ಮಹಿಳೆ ಬಿಂದು ಅಮ್ಮಿನಿಯವರ ಮೇಲೆ ಕೋಝಿಕ್ಕೋಡ್‌ ಜಿಲ್ಲೆಯಲ್ಲಿ ದಾಳಿ ನಡೆದಿದೆ. ಯಾವುದೇ ಪ್ರಚೋದನೆ ಇಲ್ಲದೆ ನಡೆದ ಈ ದಾಳಿಯ ಹಿಂದೆ ಆರ್‌ಎಸ್ಎಸ್‌ ಕೈವಾಡ ಇದೆ ಎಂದು ಅಮ್ಮಿನಿ ಆರೋಪಿಸಿದ್ದಾರೆ.
 
ಅಮ್ಮಿನಿ ಅವರ ಮೇಲೆ ಹಲ್ಲೆ ನಡೆಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ವಿಡಿಯೋದಲ್ಲಿ ಹಲ್ಲೆ ಬಳಿಕ ಅಮ್ಮಿನಿ ಅವರ ಕತ್ತು ಹಿಸುಕಿ ಉಸಿರುಗಟ್ಟಿಸುವುದು ಕೂಡಾ ಚಿತ್ರಿತಗೊಂಡಿದೆ. ಕೋಝಿಕ್ಕೋಡ್‌ ಬೀಚ್‌ ಸಮೀಪ ವಕೀಲರನ್ನು ಭೇಟಿಯಾಗಲು ತೆರಳಿದ ಸಂಧರ್ಭ ಈ ದಾಳಿ ನಡೆದಿದೆ. 

ನನಗೆ ಇಂತಹ ದಾಳಿ ಇದೇ ಮೊದಲ ಬಾರಿಯೇನಲ್ಲ, ಈ ಹಿಂದೆಯೂ ಹಲವು ಬಾರಿ ಇಂತಹ ದಾಳಿಗೊಳಗಾಗಿದ್ದೇನೆ, ಹಾಗಾಗಿ ಇದು ಆಘಾತವೇನೂ ಆಗಿಲ್ಲ ಎಂದು ಅಮ್ಮಿನಿ ಹೇಳಿದ್ದಾರೆ.  ಕೇರಳದ ಪೊಲೀಸರು ತನಗೆ ರಕ್ಷಣೆ ನೀಡುವ ಯಾವ ಭರವಸೆಯೂ ತನಗಿಲ್ಲ. ತನ್ನೊಂದಿಗೆ ಶಬರಿ ಮಲೆ ಪ್ರವೇಶಿಸಿದ ಕನಕ ದುರ್ಗ ಅವರಿಗೆ ಪೊಲೀಸರು ಕೆಲವೊಮ್ಮೆಯಾದರೂ ಭದ್ರತೆ ನೀಡುತ್ತಾರೆ. ದಲಿತಳಾದ ನನಗೆ ಅದೂ ಕೂಡಾ ಇಲ್ಲ ಎಂದು ಅವರು ಹೇಳಿದ್ದಾರೆ. 

ದಾಳಿಗೂ ಅರ್ಧ ಗಂಟೆ ಮುನ್ನವೇ ಅಪಾಯದ ಮುನ್ಸೂಚನೆ ನನಗೆ ಬಂದಿತ್ತು. ಸಂಭಾವ್ಯ ದಾಳಿಯ ಬಗ್ಗೆ ಕೊಯಿಲಾಂಡಿ ಪೊಲೀಸ್‌ ಅಧಿಕಾರಿಗೆ ತಿಳಿಸಿದ್ದೆ. ಅದಾಗ್ಯೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಮ್ಮಿನಿ ತಿಳಿಸಿದ್ದಾರೆ. ಅಮ್ಮಿನಿ ಮೇಲೆ ದಾಳಿ ಮಾಡಿದ ವ್ಯಕ್ತಿಯನ್ನು ಮೋಹನ್‌ ದಾಸ್‌ ಎಂದು ಗುರುತಿಸಲಾಗಿದೆ. ಬಂಧಿತನ ವಿರುದ್ಧ ಜಾಮೀನು ನೀಡಬಹುದಾದ ಸಣ್ಣ ಅಪರಾಧದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. 
 
ಶಬರಿಮಲೆಗೆ ಮಹಿಳೆಯರೂ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಅಮ್ಮಿನಿ ಹಾಗೂ ಕನಕದುರ್ಗ ಶಬರಿಮಲೆಯನ್ನು ಪ್ರವೇಶಿಸಿದ್ದರು. ಆ ಮೂಲಕ 10 ರಿಂದ 50 ವರ್ಷದೊಳಗಿನ ಮಹಿಳೆಯರಲ್ಲಿ ಶಬರಿ ಮಲೆ ಪ್ರವೇಶಿಸಿದ ಮೊದಲ ಮಹಿಳೆಯರು ಎಂಬ ಖ್ಯಾತಿ ಪಡೆದಿದ್ದರು. 

ಅಮ್ಮಿನಿ ಅವರ ಪ್ರಕಾರ, ಅವರು ಇದುವರೆಗೂ 10 ಕ್ಕೂ ಹೆಚ್ಚು ಬಾರಿ ದಾಳಿಗೊಳಗಾಗಿದ್ದಾರೆ. ಕಮಿಷನರ್‌ ಕಛೇರಿ ಮುಂಭಾಗದಲ್ಲೇ ಒಮ್ಮೆ ಭೀಕರ ದಾಳಿಯಾಗಿದ್ದು, ಅಮ್ಮಿನಿ ವಿರುದ್ಧ ಕೊಲೆ ಪ್ರಯತ್ನ ನಡೆಸಲಾಗಿತ್ತು. ಆಟೋ ರಿಕ್ಷಾದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಅಮ್ಮಿಣಿ ಅವರ ತಲೆಗೆ ಏಟಾಗಿತ್ತು. ಶಬರಿಮಲೆ ಪ್ರವೇಶಿಸಿದಂದಿನಿಂದ ಅಮ್ಮಿಣಿ ಕೊಲೆ ಬೆದರಿಕೆಗಳು, ಹಲವು ದಾಳಿಗಳನ್ನು ಎದುರುಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News